ನವದೆಹಲಿ: ದೇಶದ ಪ್ರಮುಖ ಮಂಡಿಗಳಲ್ಲಿ ಈರುಳ್ಳಿ ಮತ್ತು ಟೊಮೆಟೊ ದಾಸ್ತಾನು ಅಭಾವ ಉಂಟಾಗಿದ್ದು, ದಿನದಿಂದ ದಿನಕ್ಕೆ ದರ ಏರಿಕೆಯಾಗುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆ.ಜಿ. ಟೊಮೆಟೊ ₹ 70ಯಲ್ಲಿ ಮಾರಾಟ ಆಗುತ್ತಿದೆ. ಈರುಳ್ಳಿ ಬೆಲೆಯಿಂದ ತತ್ತರಿಸಿದ್ದ ಗ್ರಾಹಕರು ಈಗ ಟೊಮೆಟೊ ಬೆಲೆಗೆ ಸಿಲುಕಿದ್ದಾರೆ.
ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುವ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತd ಕೆಲವು ರಾಜ್ಯಗಳು ಪ್ರವಾಹಕ್ಕೆ ಸಿಲುಕಿದ್ದು, ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಿದೆ. ತತ್ಪರಿಣಾಮ ಮಂಡಿಗಳಲ್ಲಿ ದಾಸ್ತಾನು ಅಭಾವ ಸೃಷ್ಟಿಯಾಗಿ ನಿತ್ಯದ ಆಹಾರ ಪದಾರ್ಥವಾದ ಈರುಳ್ಳಿ ಹಾಗೂ ಟೊಮೆಟೊ ಧಾರಣೆ ಏರಿಕೆಯಾಗುತ್ತಿದೆ.
ಕಳೆದ ವರ್ಷದ ಇದೇ ಅವಧಿಗೆ ಇದ್ದ ಬೆಲೆಗಳಿಗಿಂತ ಈರುಳ್ಳಿ ಬೆಲೆ ದ್ವಿಗುಣಗೊಂಡಿದೆ. ಟೊಮೆಟೊ ಸಹ ಇದರಿಂದ ಹೊರತಾಗಿಲ್ಲ. ದೆಹಲಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕೆ.ಜಿ ಟೊಮೆಟೊ 40- 60 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿತ್ತು. ಈಗ ಅದು 70 ರೂ. ಸನಿಹಕ್ಕೆ ಬಂದು ನಿಂತಿದೆ. ಅಜಾದ್ಪುರ್ ಮಂಡಿಯಲ್ಲಿ ಉತ್ತಮ ಗುಣಮಟ್ಟದ 25 ಕೆ.ಜಿ. ಟೊಮೆಟೊ 800 ರೂ. ಹಾಗೂ ಸಾಧಾರಣಾ ಗುಣಮಟ್ಟದ ಟೊಮೆಟೊ 500 ರೂ. ಮಾರಾಟ ಆಗುತ್ತಿದೆ.