ಮುಂಬೈ: ಷೇರುಪೇಟೆಯಲ್ಲಿ ಭಾರಿ ನಷ್ಟದೊಂದಿಗೆ ಇಂದಿನ ವಹಿವಾಟು ಮುಕ್ತಾಯವಾಗಿದೆ.
ದಿನದ ಆರಂಭದಲ್ಲೇ 300 ಅಂಕಗಳ ನಷ್ಟದೊಂದಿಗೆ ಪ್ರಾರಂಭವಾಗಿದ್ದ ಸೆನ್ಸೆಕ್ಸ್ (Sensex) ದಿನದಾಂತ್ಯಕ್ಕೆ ಒಟ್ಟು 433 ಅಂಕಗಳ ಕುಸಿತ ಕಂಡು 59,920ರಲ್ಲಿ ವಹಿವಾಟು ಮುಗಿಸಿತು. ನಿಫ್ಟಿ 144 ಅಂಕಗಳ ನಷ್ಟದ ಬಳಿಕ 17,874ಕ್ಕೆ ಕುಸಿದಿದೆ. ಬ್ಯಾಂಕಿಂಗ್ ಕ್ಷೇತ್ರ, ಎಫ್‌ಎಂಸಿಜಿ, ಆಟೋ, ಐಟಿ ಕ್ಷೇತ್ರದ ಷೇರುಗಳು ಭಾರಿ ನಷ್ಟ ಅನುಭವಿಸಿದವು.
ಈ ದಿನದ ಗರಿಷ್ಠ ಮಟ್ಟ ಅಂದರೆ 60,293ಕ್ಕೆ ಏರಿದ ಕೂಡಲೇ ಸೆನ್ಸೆಕ್ಸ್ ದೊಡ್ಡ ಪ್ರಮಾಣದಲ್ಲಿ ಪತನವಾಯಿತು. ಕೊನೆಗೆ 433 ಅಂಕಗಳ ಇಳಿಕೆಯೊಂದಿಗೆ 59,920ರಲ್ಲಿ ವಹಿವಾಟು ಮುಗಿಸಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವ್ಯತಿರಿಕ್ತ ಪರಿಣಾಮಗಳು ಹಾಗೂ ಹಣದುಬ್ಬರದ ಭೀತಿಯ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಇಂದೂ ಕೂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅಮೆರಿಕದ ಷೇರುಪೇಟೆ ಮಾತ್ರ ಶೇ.6.2 ರಷ್ಟು ಏರಿಕೆ ಕಂಡಿದೆ.
ನಿಫ್ಟಿ ಬೆಳಗ್ಗೆ 50 ಅಂಕಗಳ ನಷ್ಟದೊಂದಿಗೆ 17,967ರಲ್ಲಿ ವ್ಯಾಪಾರ ಆರಂಭಿಸಿತು. ಗರಿಷ್ಠ 17,971ಕ್ಕೇರಿದ ಕೆಲವೇ ನಿಮಿಷಗಳಲ್ಲಿ 17,798ಕ್ಕೆ ಕುಸಿಯಿತು. ಕೊನೆಯದಾಗಿ 144 ಅಂಕಗಳ ಕುಸಿತದೊಂದಿಗೆ 17,874ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ಲಾಭ, ನಷ್ಟದ ಅಗ್ರ ಕಂಪನಿಗಳಿವು..
ಟೈಟಾನ್, ರಿಲಯನ್ಸ್, ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಟಿಸಿಎಸ್ ಷೇರುಗಳು ಲಾಭಗಳಿಸಿದರೆ, ಎಸ್‌ಬಿಐ, ಏರ್‌ಟೆಲ್, ಬಜಾಬ್ ಫೈನಾನ್ಸ್, ಸನ್‌ಫಾರ್ಮಾ, ಆಕ್ಸೀಸ್ ಬ್ಯಾಂಕ್ ನಷ್ಟ ಅನುಭವಿಸಿದ ಅಗ್ರ ಕಂಪನಿಗಳಾಗಿವೆ.
ಕಳೆದ ವಾರ ಕರಡಿ ಕುಣಿತ ಕಂಡಿದ್ದ ಮುಂಬೈ ಷೇರುಪೇಟೆಯಲ್ಲಿ ಈ ವಾರದ ಆರಂಭದ ದಿನವಾದ ಸೋಮವಾರ ಗೂಳಿ ಓಟ ಮುಂದುವರಿಕೆ ಷೇರುದಾರರಿಗೆ ಸಮಾಧಾನ ತಂದಿತ್ತು. ಆದರೆ ನಂತರದ ಮೂರು ದಿನಗಳಿಂದ ಷೇರುಗಳ ಮೌಲ್ಯ ಕುಸಿಯುತ್ತಲೇ ಇದೆ.