ನವದೆಹಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಮೊಬೈಲ್ ಡೇಟಾ ದರವು ಶೇ 95ರಷ್ಟು ಕುಸಿದು, ಪ್ರತಿ ಜಿಬಿ ಡೇಟಾ ₹ 11.78ಯಲ್ಲಿ ಲಭ್ಯವಾಗುತ್ತಿದೆ. ಇದೇ ಅವಧಿಯಲ್ಲಿ ಆದಾಯ ದರ 2.5 ಪಟ್ಟು ಹೆಚ್ಚಾಗಿ ₹ 54,671 ಕೋಟಿಗೆ ತಲುಪಿದೆ ಎಂದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿಳಿಸಿದೆ.
ದೇಶದಲ್ಲಿ 2014ರ ವೇಳೆ 828 ದಶಲಕ್ಷ ಜಿಬಿಯ ಡೇಟಾ ಬಳಕೆ 2018ರಲ್ಲಿ 56 ಪಟ್ಟು ಹೆಚ್ಚಳವಾಗಿ 46,404 ದಶಲಕ್ಷ ಜಿಬಿಗೆ ಏರಿದೆ. ಸರಾಸರಿ ದತ್ತಾಂಶ ಬಳಕೆ ಪ್ರತಿ ಅವಧಿಯಲ್ಲಿ ಪ್ರತಿ ಚಂದಾದಾರರಿಗೆ 0.27 ಜಿಬಿಯಿಂದ 7.6 ಜಿಬಿಗೆ ಹೆಚ್ಚಳವಾಗಿದೆ ಎಂದು ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.
ವೈರ್‌ಲೆಸ್ ಡೇಟಾ ಬಳಕೆಯ ಒಟ್ಟು ಪ್ರಮಾಣವು 2017ರಲ್ಲಿ 20,092 ಮಿಲಿಯನ್ ಜಿಬಿಯಿಂದ 2018ರಲ್ಲಿ 46,404 ಮಿಲಿಯನ್ ಜಿಬಿಗೆ ಜಿಗಿದಿದೆ. ವಾರ್ಷಿಕ ಬೆಳವಣಿಗೆಯ ದರವು ಶೇ 131ರಷ್ಟಿದ್ದು, 2014ರಲ್ಲಿ ವೈರ್‌ಲೆಸ್ ಡೇಟಾ ಬಳಕೆಯ ಒಟ್ಟು ಪ್ರಮಾಣ ಕೇವಲ 828 ಮಿಲಿಯನ್ ಜಿಬಿ ಮಾತ್ರ ಇತ್ತು.
2018ರಲ್ಲಿ ವೈರ್‌ಲೆಸ್ ಡೇಟಾ ಬಳಕೆಯ 4ಜಿ ತಂತ್ರಜ್ಞಾನವು ಶೇ 86.85ರಷ್ಟು ಆಕ್ರಮಿಸಿಕೊಂಡು 40,304 ಮಿಲಿಯನ್ ಜಿಬಿ ಸಾಮರ್ಥ್ಯ ಹೊಂಡಿದೆ. 2ಜಿ, 3ಜಿ ಮತ್ತು ಸಿಡಿಎಂಎ ಡೇಟಾ ಪಾಲು ಕ್ರಮವಾಗಿ ಶೇ 0.95, ಶೇ 12.18 ಮತ್ತು ಶೇ 0.01ರಷ್ಟಿದೆ ಎಂದು ಹೇಳಿದೆ.