ನವದೆಹಲಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ತಯಾರಿಸಿದ ಭಾರತದ ಮೊಟ್ಟಮೊದಲ ಖಾದಿ ಫ್ಯಾಬ್ರಿಕ್ ಪಾದರಕ್ಷೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪಾದರಕ್ಷೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಎಂಎಸ್‌ಎಂಇ ಸಚಿವ ಗಡ್ಕರಿ, ಖಾದಿ ಕುಶಲಕರ್ಮಿಗಳನ್ನು ಇಂತಹ ಆಕರ್ಷಕ ಪಾದರಕ್ಷೆಗಳನ್ನು ವಿನ್ಯಾಸಗೊಳಿಸಿದ್ದಕ್ಕೆ ಅಭಿನಂದನೆಗಳು ಎಂದರು.
ಕುಶಲಕರ್ಮಿಗಳ ಪ್ರಯತ್ನ ಖಾದಿ ಉದ್ಯಮಕ್ಕೆ ಉತ್ತೇಜನ ನೀಡುತ್ತದೆ. ಸ್ಥಳೀಯ ಉದ್ಯೋಗ ಹೆಚ್ಚಿಸಲು ಸಹಕಾರಿಯಾಗುತ್ತದೆ. ಖಾದಿ ಬಳಕೆ ಹೆಚ್ಚಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಯಾಗಿದೆ ಎಂದರು.
ಪ್ರತಿ ಜೋಡಿ ಖಾದಿ ಶೂ ಬೆಲೆ 1,100ರಿಂದ 3,300 ರೂ.ಗೆ ಇರಲಿದೆ. ಆರಂಭದಲ್ಲಿ ಮಹಿಳೆಯರಿಗೆ 15 ಹಾಗೂ ಪುರುಷರಿಗಾಗಿ 10 ವಿಧಗಳಲ್ಲಿ ವಿನ್ಯಾಸಗೊಳಿಸಿ ಪರಿಚಯಿಸಲಾಗಿದೆ. ಈ ಪಾದರಕ್ಷೆಗಳು ಪ್ರಸಿದ್ಧ ಮಧುಬಾನಿ ಚಿತ್ರಕಲೆ ಸೇರಿದಂತೆ ದೇಶಾದ್ಯಂತದ ವರ್ಣಚಿತ್ರಗಳನ್ನು ಹೊಂದಿವೆ. ಖಾದಿ ಬಟ್ಟೆಯ ಜೊತೆಗೆ ಭಾರತದ ವಿವಿಧ ಕಲಾ ಪ್ರಕಾರಗಳನ್ನು ಉತ್ತೇಜಿಸಲು ಈ ವಿಶಿಷ್ಟ ಉಪಕ್ರಮ ಕೈಗೊಳ್ಳಲಾಗಿದೆ.
ಕೆವಿಐಸಿಯ ಇ-ಪೋರ್ಟಲ್ www.khadiindia.gov.in ಮೂಲಕ ಆಸಕ್ತರು ಶೂ ಖರೀದಿಸಬಹುದು.