ನವದೆಹಲಿ: ವಾರ್ಷಿಕವಾಗಿ ಸುಮಾರು 4,500 ಕೋಟಿ ರೂ. ವಹಿವಾಟು ನಡೆಸುವ ಐಸ್‌ಕ್ರೀಮ್ ಉದ್ಯಮವು ಕೊರೊನಾ ವೈರಸ್ ಹಬ್ಬುವಿಕೆಯಿಂದ ತೀವ್ರ ನಷ್ಟ ಅನುಭವಿಸಿದ್ದು, ಬೆಳವಣಿಗೆಯು ಸುಮಾರು 40 ಪ್ರತಿಶತದಷ್ಟು ನಿಧಾನವಾಗಲಿದೆ.
ಪ್ರಸ್ತುತ ಸನ್ನಿವೇಶ ಗಮನಿಸಿದರೇ ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ. ಯಾಕೆಂದರೆ, ಈಗಾಗಲೇ ಮಳೆಗಾಲ ಸಹ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಐಸ್ ಕ್ರೀಮ್ ಬೇಡಿಕೆ ಕರಗುತ್ತದೆ. ಡೈರಿ ಉತ್ಪನ್ನಗಳ ಅಮುಲ್ ಬ್ರಾಂಡ್ನ ಐಸ್ ಕ್ರೀಮ್ ಮಾರಾಟವು 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.50ರಷ್ಟು ಕಡಿಮೆಯಾಗಲಿದೆ.
ಕೊರೊನಾದಿಂದ ಐಸ್ ಕ್ರೀಮ್ ವ್ಯವಹಾರವು ಕೆಟ್ಟ ಪರಿಸ್ಥಿತಿಗೆ ನೂಕಲ್ಪಟ್ಟಿದೆ. ಪ್ರಸಕ್ತ ಹಣಕಾಸಿನ ಮೊದಲ ತ್ರೈಮಾಸಿಕದಲ್ಲಿ ಅಮುಲ್ ಐಸ್ ಕ್ರೀಮ್ ಮಾರಾಟವು ಶೇ 50ರಷ್ಟು ಕಡಿಮೆಯಾಗಬಹುದು. ಇತರ ಐಸ್ ಕ್ರೀಮ್ ಕಂಪನಿಗಳ ಮಾರಾಟವು ಶೇ.70-80ರಷ್ಟು ಇಳಿಕೆ ಆಗಬಹುದು ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಫೆಡರೇಷನ್ನ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಡಾ. ಆರ್ ಎಸ್ ಸೋದಿ ಹೇಳಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಮಾರ್ಚ್ನಲ್ಲಿ ಐಸ್ ಕ್ರೀಮ್ ಮಾರಾಟವು ಶೇ.95ರಷ್ಟು, ಏಪ್ರಿಲ್ನಲ್ಲಿ ಶೇ.55 ಮತ್ತು ಮೇ ತಿಂಗಳಲ್ಲಿ ಶೇ.70ರಷ್ಟು ಕಡಿಮೆಯಾಗಿದೆ. ಲಾಕ್ಡೌನ್ ತೆರವಾದ ಬಳಿಕ ಐಸ್ ಕ್ರೀಮ್ ಮಾರಾಟವು ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರೂ ಹೋಟೆಲ್, ರೆಸ್ಟೋರೆಂಟ್ ಮತ್ತು ಕ್ಯಾಂಟೀನ್‌ಗಳಲ್ಲಿನ ಬೇಡಿಕೆ ಇನ್ನೂ ಕಡಿಮೆಯಾಗಿದೆ ಎಂದರು.
ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಐಸ್ ಕ್ರೀಮ್ಗೆ ಬೇಡಿಕೆ ತುಂಬಾ ಕಡಿಮೆಯಾಗಿದೆ. ಆದ್ದರಿಂದ ಜೂನ್ ತಿಂಗಳಲ್ಲಿ ಮಾರಾಟವು ಶೇ 30ಕ್ಕಿಂತ ಹೆಚ್ಚಾಗುವುದಿಲ್ಲ. ಮಾರ್ಚ್‌ನಿಂದ ಜೂನ್‌ವರೆಗೆ ಐಸ್‌ಕ್ರೀಮ್‌ಗಳ ಮಾರಾಟವು ಶೇ 60ರಷ್ಟಿದೆ. ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಬೇಡಿಕೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.