ನವದೆಹಲಿ: ತೈಲ ಬೆಲೆಗಳ ಜಾಗತಿಕ ಕುಸಿತ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಆಗಾಗ ಏರಿಕೆ ಆಗುವುದರಿಂದ ದೇಶಿಯ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡುವ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ.
ಸೆಪ್ಟೆಂಬರ್ 1ರ ವೇಳೆಗೆ ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ 594 ರೂ. ಇರಲಿದೆ. ಇದರ ಅರ್ಥವೇನೆಂದರೆ ಸರ್ಕಾರವು ಇನ್ನು ಮುಂದೆ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ಪಾವತಿಸಬೇಕಾಗಿಲ್ಲ.
ಈ ಹಣಕಾಸಿನ ವರ್ಷದ ಆರಂಭದಿಂದ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ನಡುವಿನ ಬೆಲೆಯ ಅಂತರವು ಕಡಿಮೆ ಆಗುತ್ತಿರುವುದರಿಂದ ಸರ್ಕಾರವು ಕಳೆದ ನಾಲ್ಕು ತಿಂಗಳಿಂದ ಯಾವುದೇ ಫಲಾನುಭವಿಗಳ ಖಾತೆಗಳಿಗೆ ನಗದು ವರ್ಗಾವಣೆ ಮಾಡಿಲ್ಲ.
ಸರ್ಕಾರವು ಎಲ್‌ಪಿಜಿ ಸಬ್ಸಿಡಿ ಮೇಲಿಂದ 2021ರ ಹಣಕಾಸು ವರ್ಷದಲ್ಲಿ 20,000 ಕೋಟಿ ರೂ. ಉಳಿಸಲಿದೆ. ಕೋವಿಡ್-19 ಪರಿಹಾರ ಯೋಜನೆಗಳಿಗೆ ವೆಚ್ಚ ಹೆಚ್ಚಳವಾಗಿದ್ದು, ಸರ್ಕಾರದ ಮೇಲೆ ಒತ್ತಡ ದೊಡ್ಡಮಟ್ಟದಲ್ಲಿದೆ.
2021ರ ಹಣಕಾಸು ವರ್ಷಕ್ಕೆ ಸರ್ಕಾರ ಪೆಟ್ರೋಲಿಯಂ ಸಬ್ಸಿಡಿಯಾಗಿ 40,915 ಕೋಟಿ ರೂ. ಮೀಸಲಿಟ್ಟಿದೆ. ಕಳೆದ ಹಣಕಾಸು ವರ್ಷದಲ್ಲಿ ನಿಗದಿಪಡಿಸಿದ 38,569 ಕೋಟಿ ರೂ.ಗಳಿಂದ ಶೇ. 6ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಎಲ್‌ಪಿಜಿ ಸಬ್ಸಿಡಿ ಹಂಚಿಕೆಯನ್ನು ಪ್ರಸಕ್ತ ವರ್ಷದಲ್ಲಿ 37,256.21 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಆದರೆ ಇಲ್ಲಿಯವರೆಗೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರವು ಸಬ್ಸಿಡಿ ನಿಬಂಧನೆಗಳಿಂದ ಕೇವಲ 1,900 ಕೋಟಿ ರೂ. ಇರಿಸಿದೆ.
ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಕುಸಿತಕ್ಕೆ ಜಾಗತಿಕ ತೈಲ ಮಾರುಕಟ್ಟೆಗಳು ಕಾರಣವಾಗಿವೆ. ತೈಲ ಕಂಪನಿಗಳು ಸಬ್ಸಿಡಿ ಪಡೆದ ಅಡುಗೆ ಅನಿಲದ ಬೆಲೆಯನ್ನು ಕಳೆದ ಜುಲೈನಲ್ಲಿ ಸಿಲಿಂಡರ್‌ಗೆ 494.35 ರೂ.ನಿಂದ ಸ್ಥಿರವಾಗಿ 594 ರೂ.ಗೆ ಏರಿಸಿದೆ. ಈ ಹೆಚ್ಚಳ ಆಗದೇ ಇದ್ದಿದ್ದರೆ 14.2 ಕೆಜಿ ದೇಶಿಯ ಸಿಲಿಂಡರ್ ಬೆಲೆ 100 ರೂ.ಗಳಿಗಿಂತ ಹೆಚ್ಚು ಅಗ್ಗವಾಗುತ್ತಿತ್ತು.
ಭಾರತದಲ್ಲಿ ಸುಮಾರು 27.76 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಈ ಪೈಕಿ ಸುಮಾರು 1.5 ಕೋಟಿ ಜನರು 2016ರ ಡಿಸೆಂಬರ್‌ನಿಂದ ಎಲ್‌ಪಿಜಿ ಸಬ್ಸಿಡಿ ಪಡೆಯಲು ಅರ್ಹರಲ್ಲ. ಏಕೆಂದರೆ ಅವರ ಆದಾಯ ವಾರ್ಷಿಕ 10 ಲಕ್ಷ ರೂ.ಗಿಂತ ಅಧಿವಾಕಗಿದ್ದು, ಹೆಚ್ಚಿನ ತೆರಿಗೆ ವಿಧಿಸಬಹುದು.