ನವದೆಹಲಿ: ಈ ಹಣಕಾಸು ವರ್ಷದ ಎಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ದೇಶದ ಚಿನ್ನದ ಆಮದು ಶೇ 35.5ರಷ್ಟು ಹೆಚ್ಚಾಗಿದೆ. ಇನ್ನೊಂದೆಡೆ ಪ್ರತಿ 10 ಗ್ರಾಂ. ಬಂಗಾರ ಬೆಲೆ ಸಾರ್ವಕಾಲಿಕ ಏರಿಕೆ ದಾಖಲಿಸಿದೆ.
2018-19ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 59 ಸಾವಿರ ಕೋಟಿ ಮೌಲ್ಯದ ಚಿನ್ನ ಆಮದು ಆಗಿತ್ತು. ಆದರೆ, ಈಗ ಅದು ₹ 80 ಸಾವಿರ ಕೋಟಿಗೆ ತಲುಪಿದೆ. ಅಗಾದ ಪ್ರಮಾಣದಲ್ಲಿ ಆಮದು ಏರಿಕೆ ಆಗುತ್ತಿದ್ದರೂ ಇನ್ನೊಂದೆಡೆ ಅಷ್ಟೇ ವೇಗದಲ್ಲಿ ಬೆಲೆ ಹೆಚ್ಚಳವಾಗುತ್ತಿದೆ. ಇದು ಚಿನ್ನಾಭರಣ ಪ್ರಿಯರಿಗೆ ತೀವ್ರ ನಿರಾಸೆ ಮೂಡಿಸಿದೆ.
ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಗುರುವಾರದ ವಹಿವಾಟಿನ ದಿನ ಮೊದಲ ಬಾರಿಗೆ 38,000 ರೂ. ಗಡಿ ದಾಟಿ ಪ್ರತಿ 10 ಗ್ರಾಂ. 38,470ಗೆ ಮಾರಾಟವಾಗಿತ್ತು. ವಿದೇಶಿ ಧನಾತ್ಮಕ ಪ್ರವೃತ್ತಿಯ ನಡುವೆ ಹೊಸ ಆಭರಣ ಖರೀದಿಯ ಮೇಲೆ ಮತ್ತೆ 50 ರೂ. ಹೆಚ್ಚಳವಾಗಿದೆ ಎಂದು ಅಖಿಲ ಭಾರತ ಸರಫ ಸಂಘಟನೆ ತಿಳಿಸಿದೆ.
ಅಮೆರಿಕ ಮತ್ತು ಚೀನಾದೊಂದಿಗನ ವ್ಯಾಪಾರದ ಉದ್ವಿಗ್ನತೆ ಹಾಗೂ ದೇಶಿಯ ಆರ್ಥಿಕ ಕಾಳಜಿಗಳ ಕಾರಣಕ್ಕೆ ಈ ಏರಿಕೆ ಕಂಡುಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನೊಂದೆಡೆ ಚಿನ್ನದ ಆಮದು ಹೆಚ್ಚಾಗಿರುವುದರಿಂದ ದೇಶದ ವ್ಯಾಪಾರ ಕೊರತೆ ಅಂತರವು ₹ 3.19 ಲಕ್ಷ ಕೋಟಿಯಿಂದ ₹ 3.26 ಲಕ್ಷ ಕೋಟಿಗೆ ಏರಿಕೆಯಾಗಿದೆ. ವ್ಯಾಪಾರ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಚಿನ್ನದ ಆಮದು ಸುಂಕವನ್ನು ಶೇ. 10ರಿಂದ ಶೇ. 12.5ಕ್ಕೆ ಏರಿಕೆ ಮಾಡಿದೆ.