ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗ ಬೇಡಿಕೆಯ ಕುಸಿತದ ನಡುವೆ ಚಾಲ್ತಿ ಖಾತೆ ಕೊರತೆಯ (ಸಿಎಡಿ) ಮೇಲೆ ಪ್ರಭಾವ ಬೀರುವ ಚಿನ್ನದ ಆಮದು ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 57ರಷ್ಟು ಇಳಿಕೆಯಾಗಿ 6.8 ಬಿಲಿಯನ್ ಡಾಲರ್‌ಗೆ (ಸುಮಾರು 50,658 ಕೋಟಿ ರೂ.) ತಲುಪಿದೆ ಎಂದ ವಾಣಿಜ್ಯ ಸಚಿವಾಲಯ ಹೇಳಿದೆ.
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಚಿನ್ನದ ಆಮದು 15.8 ಬಿಲಿಯನ್ ಡಾಲರ್ (ಸುಮಾರು 1,10,259 ಕೋಟಿ ರೂ.) ಮೌಲ್ಯದಷ್ಟಿತ್ತು. 2020ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಬೆಳ್ಳಿ ಆಮದು ಶೇ 63.4ರಷ್ಟು ಇಳಿದು 733.57 ಮಿಲಿಯನ್ ಡಾಲರ್‌ಗೆ (ಸುಮಾರು 5,543 ಕೋಟಿ ರೂ.) ಇದೆ ಎಂದು ಅಂಕಿ - ಅಂಶಗಳು ತೋರಿಸಿವೆ.
ಚಿನ್ನ ಮತ್ತು ಬೆಳ್ಳಿ ಆಮದಿನ ಕುಸಿತವು ದೇಶದ ವ್ಯಾಪಾರ ಕೊರತೆ, ಆಮದು ಮತ್ತು ರಫ್ತುಗಳ ನಡುವಿನ ವ್ಯತ್ಯಾಸ 2020 - 21ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 23.44 ಬಿಲಿಯನ್ ಡಾಲರ್‌ಗೆ ತಲುಪುವಲ್ಲಿ ನೆರವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 88.92 ಬಿಲಿಯನ್ ಡಾಲರ್ ಆಗಿತ್ತು.
ಭಾರತವು ಚಿನ್ನದ ಅತಿದೊಡ್ಡ ಆಮದುದಾರರಾಗಿದ್ದು, ಆಭರಣ ಉದ್ಯಮದ ಬೇಡಿಕೆ ಪೂರೈಸುತ್ತದೆ. ದೇಶವು ವಾರ್ಷಿಕವಾಗಿ 800-900 ಟನ್ ಚಿನ್ನ ಆಮದು ಮಾಡಿಕೊಳ್ಳುತ್ತದೆ. ಸಾಂಕ್ರಾಮಿಕ ರೋಗದ ಮಧ್ಯೆ 2020ರ ಏಪ್ರಿಲ್-ಸೆಪ್ಟೆಂಬರ್ನಲ್ಲಿ ರತ್ನ ಮತ್ತು ಆಭರಣ ರಫ್ತು ಶೇ 55ರಷ್ಟು ಇಳಿದು 8.7 ಬಿಲಿಯನ್ ಡಾಲರ್‌ಗೆ ತಲುಪಿದೆ.