ನವದೆಹಲಿ: ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಪುರಸಭೆಗಳು ತಮ್ಮ ಪ್ರಾದೇಶಿಕ ಮಿತಿಯಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ದೇಶದ ಅತಿದೊಡ್ಡ ವ್ಯಾಪಾರಿಗಳ ಸಂಘ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಈ ನಿರ್ಧಾರವನ್ನು ಶ್ಲಾಘಿಸಿದೆ.
ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಸಾಯಿ ಮಾತನಾಡಿ, ಕೊರೊನಾಗೆ ಸಂಬಂಧಿಸಿದ ಪ್ರಸ್ತುತ ಸಂದರ್ಭವನ್ನು ಸಂಪೂರ್ಣವಾಗಿ ಅಂದಾಜು ಮಾಡಿದ ನಂತರವೇ ಸಾರ್ವಜನಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದರು.
ದೇಶಾದ್ಯಂತದ ವ್ಯಾಪಾರಿಗಳು ತೀವ್ರ ಉತ್ಸಾಹದಿಂದ ಅಂಗಡಿಗಳನ್ನು ತೆರೆಯಬೇಡಿ. ಆಯಾ ರಾಜ್ಯ ಸರ್ಕಾರದ ಆದೇಶಕ್ಕಾಗಿ ಕಾಯಬೇಕೆಂದು ನಾವು ಮನವಿ ಮಾಡುತ್ತೇವೆ. ಅವರ ಸೂಚನೆಯ ಪ್ರಕಾರ ಅಂಗಡಿಗಳನ್ನು ತೆರೆಯಬಹುದು. ವ್ಯಾಪಾರ ಮತ್ತು ಅಂಗಡಿಗಳ ವಹಿವಾಟು ಕುರಿತು ಕೆಲವು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಖಂಡೇಲ್ವಾಲ್ ಹೇಳಿದರು.
7 ಕೋಟಿಗೂ ಅಧಿಕ ವ್ಯಾಪಾರಿಗಳನ್ನು ಹೊಂದಿರುವ ಒಕ್ಕೂಟದ ಪ್ರತಿನಿಧಿಗಳು, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ಅಂಗಡಿಗಳು ಅಥವಾ ಮಾರುಕಟ್ಟೆಗಳನ್ನು ತೆರೆಯುವ ವೇಳೆ ಅಂಗಡಿ ಮತ್ತು ಮಾರುಕಟ್ಟೆಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರ ತಕ್ಷಣವೇ ಸ್ಪಷ್ಟ ಯೋಜನೆಯನ್ನು ರೂಪಿಸಬೇಕು. ಮಾರುಕಟ್ಟೆ ಮತ್ತು ಅಂಗಡಿಗಳನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಬೇಕು ಎಂದು ಒತ್ತಾಯಿಸಿದೆ.