ನವದೆಹಲಿ: ಕಚ್ಚಾ ತೈಲದ ಬೆಲೆಯು ಸೋಮವಾರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಪೂರೈಕೆ ಹೆಚ್ಚಳ ಹಾಗೂ ಬೇಡಿಕೆ ಕುಸಿತದ ಕಾರಣ ಮಾರುಕಟ್ಟೆಯಲ್ಲಿ ತೈಲದ ಸಂಗ್ರಹ ಹೆಚ್ಚಿದೆ. ಇನ್ನೊಂದೆಡೆ ದೇಶಿ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ನಿತ್ಯ ಬೆಲೆ ಏರುತ್ತಲೇ ಇದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಫ್ಯೂಚರ್ 0.43ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 3,038 ರೂ.ಗೆ ತಲುಪಿದೆ. ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿನ ಜುಲೈ ವಿತರಣೆಯ ಕಚ್ಚಾ ತೈಲವು 13 ರೂ. ಅಥವಾ 0.43 ರಷ್ಟು ಇಳಿಕೆಯಾಗಿದೆ.
ಆಗಸ್ಟ್ ವಿತರಣೆಯ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 3,061 ರೂ.ಗೆ ತಲುಪಿ 21 ರೂ. ಅಥವಾ ಶೇ 0.68ರಷ್ಟು ಕಡಿಮೆಯಾಗಿದೆ. ಜಾಗತಿಕವಾಗಿ ಪಶ್ಚಿಮ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 39.75 ಡಾಲರ್‌ಗೆ ಸಮವಾಗಿ ವಹಿವಾಟು ನಡೆಸುತ್ತಿದೆ. ಬ್ರೆಂಟ್ ಕಚ್ಚಾ ತೈಲವು ನ್ಯೂಯಾರ್ಕ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 0.07ರಷ್ಟು ಏರಿಕೆ ಕಂಡು 42.22 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಕೋವಿಡ್ ತಂದಿಟ್ಟ ಸಂಕಷ್ಟದಿಂದ ಉಂಟಾದ ಆದಾಯ ನಷ್ಟಕ್ಕೆ ಪ್ರತಿಯಾಗಿ ಖಜಾನೆ ಭರ್ತಿಗೆ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಇಂಧನ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿತ್ತು. ಲಾಕ್ಡೌನ್ ಬಳಿಕ ಬೇಡಿಕೆಯಿಂದ ತತ್ತರಿಸಿದ್ದ ತೈಲ ವಿತರಕ ಕಂಪನಿಗಳು ನಿಧಾನಕ್ಕೆ ಬೆಲೆ ಏರಿಸುತ್ತಿವೆ. ಕಳೆದ 16 ದಿನಗಳಿಂದ ತೈಲ ಬೆಲೆ ಹೆಚ್ಚಳವಾಗುತ್ತಿದೆ. ಈವರೆಗೂ ಪೆಟ್ರೋಲ್ ಮತ್ತು ಡಿಸೇಲ್ ದರ ಕ್ರಮವಾಗಿ ₹ 8.3 (₹ 79.56) & ₹ 9.46 (₹ 78.55) ಏರಿದೆ. ಈ ಮೂಲಕ 2002ರ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾಗಿದೆ.