ನವದೆಹಲಿ: ಲಾಕ್ಡೌನ್ ಜಾರಿಗೆ ವಿಮಾನ ನಿಲ್ದಾಣಗಳು ಸೇರಿದಂತೆ ಎಲ್ಲ ಪಾಲುದಾರರು ಸಹಕರಿಸಿದ್ದಾರೆ. ಆದ್ದರಿಂದ ಮೇ 25ರಿಂದ ವಿಮಾನಗಳನ್ನು ಪುನರಾರಂಭಿಸಲು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಮೂರೂ ತಿಂಗಳುಗಳವರೆಗೆ ವಿಮಾನಗಳ ಕನಿಷ್ಠ ಹಾಗೂ ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ. ಕೇವಲ ಮೂರನೇ ಒಂದು ಭಾಗದಷ್ಟು ವಿಮಾನಗಳನ್ನು ಮಾತ್ರ ಮೆಟ್ರೋ ನಗರಗಳಿಂದ ಸಾಮಾನ್ಯ ನಗರಗಳಿಗೆ ಸಂಚರಿಸಲು ಅನುಮತಿಸಲಾಗುವುದು. ವಾರಕ್ಕೆ 100ಕ್ಕೂ ಅಧಿಕ ಇರಲಿವೆ ಎಂದರು.
ಸರ್ಕಾರಿ ಮತ್ತು ಎಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಈ ನಿಯಮ ಅನ್ವಯಿಸಲಿದೆ. ಕನಿಷ್ಠ ದರ 3,500 ರೂ. ಹಾಗೂ ಗರಿಷ್ಠ ದರ 10,000 ರೂ. ಎಂದು ನಿಗದಿಪಡಿಸಲಾಗಿದೆ. ನಿರ್ದಿಷ್ಟ ವಿಮಾನದ ಶೇ 40ರಷ್ಟು ಸೀಟುಗಳ ದರಪಟ್ಟಿಯು ಶೇ 50ರಷ್ಟು ಕಡಿಮೆ ಇರಬೇಕು ಎಂದು ಹೇಳಿದ್ದಾರೆ.
ವಿಮಾನ ಅವಧಿಗಳ 7 ವಿಭಾಗಗಳು
0-40 ನಿಮಿಷಗಳು
40-60 ನಿಮಿಷಗಳು
60-90 ನಿಮಿಷಗಳು
90-120 ನಿಮಿಷಗಳು
120-150 ನಿಮಿಷಗಳು
150-180 ನಿಮಿಷಗಳು
180-210 ನಿಮಿಷಗಳು
ನಾವು ಶುಲ್ಕ ನಿಯಂತ್ರಣಕ್ಕಾಗಿ ಏಳು ವಿಭಾಗಗಳಲ್ಲಿ ಮಾರ್ಗಗಳನ್ನು ವಿಂಗಡಿಸಿದ್ದೇವೆ. ಮೊದಲ ವಿಭಾಗದ ಹಾರಾಟದ ಅವಧಿ 40 ನಿಮಿಷಗಳಿಗಿಂತ ಕಡಿಮೆಯಿದೆ. ಶುಲ್ಕ ನಿಯಂತ್ರಣಕ್ಕಾಗಿ ದೇಶಿಯ ವಿಮಾನ ಮಾರ್ಗದ ಎರಡನೇ ವಿಭಾಗವು ವಿಮಾನದ ಅವಧಿ 40-60 ನಿಮಿಷಗಳ ನಡುವೆ ಇರುತ್ತದೆ. ಉಳಿದವುಗಳು 60-210 ನಿಮಿಷದ ನಡುವೆ ಇರಲಿದೆ ಎಂದರು.
ನಾವು ಕನಿಷ್ಠ ಮತ್ತು ಗರಿಷ್ಠ ಶುಲ್ಕವನ್ನು ನಿಗದಿಪಡಿಸಿದ್ದೇವೆ. ದೆಹಲಿ, ಮುಂಬೈಯಲ್ಲಿ 90-120 ನಿಮಿಷಗಳ ನಡುವಿನ ಪ್ರಯಾಣಕ್ಕೆ ಕನಿಷ್ಠ ಶುಲ್ಕ 3,500 ರೂ., ಗರಿಷ್ಠ ಶುಲ್ಕ 10,000 ರೂ. ಇರಲಿದೆ. ಇದು ಮುಂದಿನ 3 ತಿಂಗಳವರಗೆ ಇರಲಿದೆ ಎಂದು ಹೇಳಿದರು.