ನವದೆಹಲಿ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಕಾಂಪ್ಯಾಕ್ಟ್ ಎಸ್‌ಯುವಿ ಮಾರುತಿ ಸುಜುಕಿಯ ವಿಟಾರ ಬ್ರೆಝಾ ಕಾರನ್ನು ಮುಂಬರುವ ಹಬ್ಬದ ಋತುವಿನಲ್ಲಿ ಮರು ಬಿಡುಗಡೆ ಮಾಡಲು ಯೋಜಿಸಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2018ರ ಮಾರ್ಚ್ ತಿಂಗಳಲ್ಲಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ ಮತ್ತು ಸುಜುಕಿ ಮೋಟಾರ್ ಕಾರ್ಪೊರೇಷನ್ (ಎಸ್‌ಎಂಸಿ) ಭಾರತೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ಮತ್ತು ಇತರ ವಾಹನಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದ್ದವು. ಇದರ ಭಾಗವಾಗಿ, ಟಿಕೆಎಂ ಈಗಾಗಲೇ ಎಂಎಸ್‌ಐನಿಂದ ಬಾಲೆನೊ ಮತ್ತು ಗ್ಲ್ಯಾನ್ಜಾ ಕಾರುಗಳಲ್ಲಿ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಮಾರುಕಟ್ಟೆಗೆ ಪರಿಚಯಿಸಿದೆ.
ಮುಂಬರುವ ಹಬ್ಬದ ಋತುವಿನ ಆರಂಭದಲ್ಲಿ ಹೊಸ ವಿನ್ಯಾಸ, ಆಕರ್ಷಕ ಲುಕ್ನೊಂದಿಗೆ ಎರಡನೇ ಉತ್ಪನ್ನವನ್ನು ಮಾರುಕಟ್ಟೆ ತರಲು ವಾಹನ ತಯಾರಕ ಕಂಪನಿ ಸಿದ್ಧವಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಸಬ್ ಫೋರ್ ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ವ್ಯಾಪಕ ಬೇಡಿಕೆಯಿದೆ. ಈ ವಿಭಾಗವು ಪ್ರಸ್ತುತ ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇ 10-11ರಷ್ಟು ಪಾಲು ಹೊಂದಿದೆ ಎಂದು ಟಿಕೆಎಂ ಹಿರಿಯ ಉಪಾಧ್ಯಕ್ಷ (ಮಾರಾಟ ಮತ್ತು ಮಾರುಕಟ್ಟೆ) ನವೀನ್ ಸೋನಿ ಪಿಟಿಐಗೆ ತಿಳಿಸಿದರು.
ಕಾಂಪ್ಯಾಕ್ಟ್ ಎಸ್‌ಯುವಿ ಮಾತ್ರ ಕಳೆದ ವರ್ಷದಲ್ಲಿ ಬೆಳವಣಿಗೆಯನ್ನು ತೋರಿಸಿದೆ. ಆದ್ದರಿಂದ ನಾವು ಈ ವಿಭಾಗವನ್ನು ಬಹಳ ಸಮಯದಿಂದ ಮೌಲ್ಯಮಾಪನ ಮಾಡುತ್ತಿದ್ದೇವೆ. ಈ ಹಬ್ಬದ ಋತುವಿನಲ್ಲಿ ನಾವು ಮಾರುಕಟ್ಟೆಯಲ್ಲಿ ನಮ್ಮದೇ ಆದ ಕಾಂಪ್ಯಾಕ್ಟ್ ಎಸ್‌ಯುವಿ ಹೊಂದಿದ್ದೇವೆ ಎಂದು ಘೋಷಿಸುವ ಸಮಯ ಬಂದಿದೆ ಎಂದು ಹೇಳಿದರು.