ನವದೆಹಲಿ: ಆಹಾರ ಹಾಗೂ ಆಹಾರೇತರ ವಸ್ತುಗಳ ಧಾರಣೆ ಕುಸಿತದಿಂದ ಸಗಟು ದರ ಸೂಚ್ಯಂಕ ಆಧಾರದ ಅಡಿ ವಾರ್ಷಿಕ ಹಣದುಬ್ಬರ 2020ರ ಮಾರ್ಚ್ ತಿಂಗಳಲ್ಲಿ ಶೇ 1ಕ್ಕೆ ತಲುಪಿದೆ.
ಬೇಡಿಕೆ ನಿಧಾನವಾಗುತ್ತಿದ್ದಂತೆ ಆಹಾರ ಮತ್ತು ಇಂಧನ ವಸ್ತುಗಳ ಬೆಲೆ ತೀವ್ರವಾಗಿ ಕುಸಿದಿದ್ದರಿಂದ ಸಗಟು ಬೆಲೆ ಹಣದುಬ್ಬರವು ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ ಶೇಕಡಾ ಒಂದಕ್ಕೆ ಇಳಿದಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಬಿಟುಗಡೆ ಮಾಡಿದ ಅಂಕಿ- ಅಂಶಗಳ ಅನ್ವಯ, ಫೆಬ್ರವರಿಯಲ್ಲಿ ಹಣದುಬ್ಬರ ಶೇ 2.26ರಷ್ಟಿದ್ದರೇ ಕಳೆದ ವರ್ಷದ ಮಾರ್ಚ್‌ನಲ್ಲಿ ಶೇ 3.10ರಷ್ಟಿತ್ತು. ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 4.91ಕ್ಕೆ ಇಳಿದಿದೆ. ಈ ಹಿಂದಿನ ಮಾಸಿಕದಲ್ಲಿ ಶೇ 7.79ರಷ್ಟು ಇದ್ದಿತ್ತು.
ಕೊರೊನಾವೈರಸ್ ಉಲ್ಬಣ ಮತ್ತು ರಾಷ್ಟ್ರವ್ಯಾಪಿ ಘೋಷಿಸಲಾಗಿರುವ ಲಾಕ್‌ಡೌನ್ ನಿಂದ ಮೇ ತಿಂಗಳ ಸಗಟು ದರ ಸೂಚ್ಯಂಕದ ಅಂಕಿಅಂಶಗಳನ್ನು ಹೆಚ್ಚಿನ ಸ್ಪಂದನೆ ಇಲ್ಲದೆ ಲೆಕ್ಕಹಾಕಲಾಗಿದೆ. ಅಂತಿಮ ತಿಂಗಳ ವರದಿ ಬಿಡುಗಡೆ ವೇಳೆ ಅಂಕಿ-ಅಂಶಗಳನ್ನು ಗಮನಾರ್ಹ ರೀತಿಯಲ್ಲಿ ಪರಿಷ್ಕರಿಸುವ ಸಾಧ್ಯತೆಯಿದೆ ಎಂದು ಸಚಿವಾಲಯ ಹೇಳಿದೆ.
ಪ್ರಾಥಮಿಕ ಪದಾರ್ಥಗಳ ಸೂಚ್ಯಂಕ ಶೇ 2.5ರಷ್ಟು ಕುಸಿದಿದ್ದರೆ, ಮೊಟ್ಟೆ, ಕೋಳಿ ಮಾಂಸ, ಚಹಾ, ಮೀನು, ಮೆಕ್ಕೆಜೋಳ, ಹಣ್ಣು ಮತ್ತು ತರಕಾರಿಗಳ ಬೆಲೆ ಕುಸಿತದಿಂದ ಆಹಾರ ಪದಾರ್ಥಗಳ ಸೂಚ್ಯಂಕ ಶೇ 2.1ರಷ್ಟು ಇಳಿಕೆಯಾಗಿದೆ.
ಈ ವಾರದ ಆರಂಭದಲ್ಲಿ ಬಿಡುಗಡೆಯಾದ ದತ್ತಾಂಶಗಳ ಅನ್ವಯ, ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 6.58ರಷ್ಟು ಇದದ್ದು ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ 5.91ಕ್ಕೆ ಇಳಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಹಣಕಾಸು ನೀತಿ ರೂಪಿಸುವಾಗ ಚಿಲ್ಲರೆ ಹಣದುಬ್ಬರ ಗಣನೆಗೆ ತೆಗೆದುಕೊಳ್ಳುತ್ತದೆ.