ನವದೆಹಲಿ: ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳ ನಿವಾರಣೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಬಜೆಟ್ ಜನಸಾಮಾನ್ಯರ ಪರವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ ಮಂಡನೆ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಣದುಬ್ಬರವನ್ನು ಎರಡಂಕಿಗೆ ತಲುಪಲು ಬಿಡಲಿಲ್ಲ. ಇದು ತಿಂಗಳಿಗೆ ಶೇ. 6ರಷ್ಟರ ಮಿತಿಯನ್ನು ಮೀರಿದೆ. ಆದರೆ ಈ ಮಿತಿಯನ್ನು ಎಂದಿಗೂ ದಾಟಿಲ್ಲ. 2014ಕ್ಕೂ ಮೊದಲು ಹಣದುಬ್ಬರ 10,11,12,13 ರ ವ್ಯಾಪ್ತಿಯಲ್ಲಿತ್ತು ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಆರ್‌ಬಿಐ ಡಿಜಿಟಲ್ ಕರೆನ್ಸಿಯನ್ನು ನೀಡುತ್ತದೆ. ಸದ್ಯಕ್ಕೆ ಕ್ರಿಪ್ಟೋ ಮತ್ತು ಕ್ರಿಪ್ಟೋ ಸ್ವತ್ತುಗಳು ಯಾವುವು ಎಂಬುದರ ಕುರಿತು ಯಾವುದೇ ಚರ್ಚೆಗಳನ್ನು ನಡೆಸಿಲ್ಲ. ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಯುತ್ತಿದೆ. ಸಮಾಲೋಚನೆಯ ನಂತರ ಡಿಜಿಟಲ್ ಆಸ್ತಿಗಳ ವಿವರಣೆ ಬರುತ್ತದೆ ಎಂದರು.
ನಾನು ಈ ವರ್ಷ ಮತ್ತು ಕಳೆದ ವರ್ಷವೂ ತೆರಿಗೆ ಹೆಚ್ಚಿಸಿ ಒಂದು ಪೈಸೆಯನ್ನೂ ಗಳಿಸಲು ಪ್ರಯತ್ನಿಸಿಲ್ಲ. ಕೊರತೆಯ ಹೊರತಾಗಿಯೂ ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ತೆರಿಗೆ ಹೊರೆಯಾಗಬಾರದು ಎಂದು ಪ್ರಧಾನಿ ಸ್ಪಷ್ಟ ಸೂಚನೆ ನೀಡಿದ್ದರು ಎಂದು ಸೀತಾರಾಮನ್ ವಿವರಿಸಿದ್ದಾರೆ.
ಡಿಜಿಟಲ್ ಸ್ವತ್ತುಗಳ ವಹಿವಾಟಿನಿಂದ ಮಾಡಿದ ಲಾಭದ ಮೇಲೆ ನಾವು ಶೇ.30ರಷ್ಟು ತೆರಿಗೆ ವಿಧಿಸುತ್ತೇವೆ. ಪ್ರತಿ ವಹಿವಾಟಿನಲ್ಲೂ ಶೇ.1ರಷ್ಟು ಟಿಡಿಎಸ್ ವಿಧಿಸುವ ಮೂಲಕ (ಕ್ರಿಪ್ಟೋ ಆಸ್ತಿಗಳ ವಹಿವಾಟು) ಹಣದ ಪ್ರತಿಯೊಂದು ಜಾಡನ್ನೂ ನಾವು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದು ಹೇಳಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ