ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ ಮಲ್ಯ ಸಲ್ಲಿಸಿದ್ದ ಪುನರ್ಪರಿಶೀಲನಾ ಅರ್ಜಿ ಕುರಿತ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಮಲ್ಯ, ತಮ್ಮ ಮಕ್ಕಳಿಗೆ 295.415 ಕೋಟಿ ರೂ. (4 ಕೋಟಿ ಡಾಲರ್) ವರ್ಗಾವಣೆ ಮಾಡಿದ್ದರು. ನ್ಯಾಯಾಲಯ ಈ ಪ್ರಕರಣದಲ್ಲಿ ತಪಿತಸ್ಥ ಎಂದು ಸುಪ್ರೀಂಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ತೀರ್ಪು ಪುನರ್ಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸಿ ನ್ಯಾಯಾಂಗ ನಿಂದನೆ ಮಾಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ, ವಾದಗಳನ್ನು ಆಲಿಸಿದ ನಂತರ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಕಳೆದ ಮೂರು ವರ್ಷಗಳಿಂದ ಮಲ್ಯ ಅವರ ಪರಿಶೀಲನಾ ಅರ್ಜಿಯನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಏಕೆ ಪಟ್ಟಿ ಮಾಡಲಾಗಿಲ್ಲ ಎಂದು ವಿವರಿಸಲು ಸುಪ್ರೀಂಕೋರ್ಟ್ ಜೂನ್‌ನಲ್ಲಿ ತನ್ನ ನೋಂದಣೆಗೆ ನಿರ್ದೇಶನ ನೀಡಿತ್ತು. ಅರ್ಜಿಗೆ ಸಂಬಂಧಿಸಿದ ಫೈಲ್‌ನೊಂದಿಗೆ ವ್ಯವಹರಿಸಿದ ಅಧಿಕಾರಿಗಳ ಹೆಸರು ಸೇರಿದಂತೆ ಎಲ್ಲ ವಿವರಗಳನ್ನು ನೀಡುವಂತೆ ಕೋರ್ಟ್ ಸೂಚಿಸಿತ್ತು.
ಪರಾರಿಯಾದ ಉದ್ಯಮಿ ವಿಜಯ ಮಲ್ಯ 2017ರ ಮೇ 9ರಂದು ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ನ ಹಲವು ಆದೇಶಗಳನ್ನು ಉಲ್ಲಂಘಿಸಿ ಡಿಯಾಗೆಯೊ ಕಂಪನಿಯಿಂದ ಪಡೆದಿದ್ದ 295.415 ಕೋಟಿ ರೂ. ವಿಜಯ ಮಲ್ಯ ತಮ್ಮ ಮಕ್ಕಳಿಗೆ ವರ್ಗಾಯಿಸಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಒಕ್ಕೂಟ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ಕೋರ್ಟ್, ಮಲ್ಯ ತಪಿತಸ್ಥರೆಂದು ಪರಿಗಣಿಸಿ 2017ರ ಮೇ 9ರಂದು ತೀರ್ಪು ನೀಡಿತ್ತು.