ಸಿಯೋಲ್: ದಕ್ಷಿಣ ಕೊರಿಯಾ ಮೂಲದ ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್ ಚೀನಾದಲ್ಲಿ ತನ್ನ ತಯಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಚೀನಾದ ದೇಶೀಯ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಈ ಸ್ಫರ್ಧೆಯಲ್ಲಿ ಕೊನೆಗೂ ಸ್ಯಾಮ್ಸಂಗ್ ಮಂಡಿಯೂರಿದೆ. ಕಳೆದ ವರ್ಷ ತಯಾರಿಕಾ ಕಾರ್ಖಾನೆಯೊಂದನ್ನು ಬಂದ್ ಮಾಡಿದ್ದ ಸ್ಯಾಮ್ಸಂಗ್ ಇದೇ ವಾರ ಉತ್ತರ ಹ್ಯುಝು ನಗರದಲ್ಲಿ ತನ್ನ ಕೊನೆಯ ಕಾರ್ಖಾನೆಗೂ ಬೀಗ ಹಾಕಿದೆ.
ಚೀನಿಯರು ಸಾಧಾರಣ ಬೆಲೆಯ ಒಪ್ಪೋ, ವಿವೋಗಳಂತ ಮೊಬೈಲ್ಗಳನ್ನೇ ಖರೀದಿ ಮಾಡುತ್ತಿದ್ದು, ದುಬಾರಿ ಮೊಬೈಲ್ಗಳೆಂದರೆ ಆ್ಯಪಲ್ ಇಲ್ಲವೇ ಹುವಾಯ್ ಮೊಬೈಲ್ನತ್ತ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಸ್ಯಾಮ್ಸಂಗ್ ಚೀನಾದಲ್ಲಿ ಒಂದರ್ಥದಲ್ಲಿ ನೆಲೆ ಕಳೆದುಕೊಂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಹಿಂಜರಿತ, ದುಬಾರಿ ಕಾರ್ಮಿಕ ಭತ್ಯೆ:
ದೇಶೀಯ ಮೊಬೈಲ್ಗಳ ತೀವ್ರ ಪೈಪೋಟಿಯಿಂದ ಸ್ಯಾಮ್ಸಂಗ್ ಚೀನಾದಲ್ಲಿ ತಯಾರಿಕೆ ಸ್ಥಗಿತಗೊಳಿಸಿದೆ ಎಂದು ಹೇಳಲಾಗುತ್ತಿದ್ದರೂ ಕಾರಣಗಳನ್ನು ಹುಡುಕುತ್ತಾ ಒಳಹೊಕ್ಕರೆ ಚೀನಾದ ಆರ್ಥಿಕ ಹಿಂಜರಿತ ಮತ್ತು ದುಬಾರಿ ಕಾರ್ಮಿಕ ಭತ್ಯೆ ಎನ್ನುವ ಕಾರಣಗಳು ಸಿಗುತ್ತವೆ.
ಭಾರತದ ಮಾದರಿಯಲ್ಲೇ ಚೀನಾದ ಆರ್ಥಿಕತೆ ಸಹ ಹಿನ್ನಡೆ ಅನುಭವಿಸಿದೆ. ಅಮೆರಿಕ ಜೊತೆಗಿನ ವಾಣಿಜ್ಯ ತಿಕ್ಕಾಟ ಚೀನಾ ದೇಶಕ್ಕೆ ಆರ್ಥಿಕತೆ ವಿಚಾರದಲ್ಲಿ ದೊಡ್ಡ ಹೊಡೆತ ಬಿದ್ದಿದೆ.
ಉತ್ಪಾದನೆ ಸ್ಥಗಿತಗೊಂಡಿದ್ದರೂ ಸ್ಯಾಮ್ಸಂಗ್ ಮೊಬೈಲ್ಗಳು ಮುಂದಿನ ದಿನಗಳಲ್ಲೂ ಚೀನಾದಲ್ಲಿ ಲಭ್ಯವಿರಲಿದೆ ಎಂದು ಕಂಪೆನಿ ಹೇಳಿದೆ.
ಚೀನಾದಿಂದ ಸೋನಿ ಸಹ ಹೊರಕ್ಕೆ..!
ಜಪಾನ್ ಮೂಲದ ಸೋನಿ ಕಂಪೆನಿ ಸಹ ಬೀಜಿಂಗ್ನಲ್ಲಿರುವ ಸ್ಮಾರ್ಟ್ಫೋನ್ ತಯಾರಿಕಾ ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಥಾಯ್ಲೆಂಡ್ನಲ್ಲಿ ಮಾತ್ರವೇ ಸೋನಿ ತನ್ನ ಸ್ಮಾರ್ಟ್ಫೋನ್ ಉತ್ಪಾದಿಸಲಿದೆ. ಇವೆಲ್ಲದರ ನಡುವೆ ಆ್ಯಪಲ್ ಸಂಸ್ಥೆ ಮಾತ್ರ ಚೀನಾದಲ್ಲಿ ಗಟ್ಟಿಯಾಗಿ ನೆಲೆಯೂರಿದೆ.