ನವದೆಹಲಿ: ಗ್ರಾಮಗಳ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರವು ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21 ಎಫ್‌ವೈ ) ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ 36,000 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಸಭೆ ನಡೆಸಿದರು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್), ಪ್ರಧಾನ ಮಂತ್ರಿ ಗ್ರಾಮ ಆವಾಸ್ ಯೋಜನೆ ( ಪಿಎಂಎವೈ-ಜಿ), ಪ್ರಧಾನ್ ಮಂತ್ರಿ ಗ್ರಾಮೀಣ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಹಾಗೂ ಕೇಂದ್ರ ಗೃಹ ಸಚಿವಾಲಯ ವಿನಾಯ್ತಿ ನೀಡಿದ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈಗಾಗಲೇ 36,000 ಕೋಟಿ ರೂ.ಗಳನ್ನು ರಾಜ್ಯಗಳು / ಯುಟಿಗಳಿಗೆ ಬಿಡುಗಡೆ ಮಾಡಿದೆ. ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಸಚಿವಾಲಯವು 33,300 ಕೋಟಿ ರೂ. ಮಂಜೂರು ಮಾಡಿದೆ. ಅದರಲ್ಲಿ 20,225 ಕೋಟಿ ರೂ. ಹಿಂದಿನ ವರ್ಷಗಳಲ್ಲಿನ ಬಾಕಿ ಇರಿಸಿಕೊಂಡಿದ್ದ ಎಲ್ಲಾ ಬಾಕಿ ವೇತನ ಮತ್ತು ಸಾಮಗ್ರಿಗಳ ಮೊತ್ತವಿದೆ ಎಂದು ಮಾಹಿತಿ ನೀಡಿದರು.
2020ರ ಜೂನ್ವರೆಗೆ ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ವೆಚ್ಚ ಪೂರೈಕೆಗೆ ಈ ಅನುಮೋದಿತ ಮೊತ್ತ ಸಾಕಾಗುತ್ತದೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಕಷ್ಟು ಆರ್ಥಿಕ ಸಂಪನ್ಮೂಲಗಳು ಲಭ್ಯವಿವೆ ಎಂದು ಸಚಿವರು ರಾಜ್ಯಗಳು ಮತ್ತು ಯುಟಿಗಳಿಗೆ ಭರವಸೆ ನೀಡಿದ್ರು.
ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆಯು ಎದುರಿಸುತ್ತಿರುವ ಸವಾಲುಗಳು ಬಹಳ ಗಂಭೀರವಾಗಿವೆ. ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಎಲ್ಲರಿಗೂ ಇದೊಂದು ಅವಕಾಶ ಎಂಬುದನ್ನು ಅರಿಯುವಂತೆ ಕೇಂದ್ರ ಸಚಿವರು ಮನವಿ ಮಾಡಿದರು.