ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಹಾರ ನೀಡಲು ನಿರಾಕರಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ದ್ರೋಹವೆಸಗಿದೆ ಎಸಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಆಡಳಿತದ ರಾಜ್ಯಗಳ ಮತ್ತು ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಜಿಎಸ್ಟಿ ಬಾಕಿ, ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಗಳ ಕುರಿತು ಚರ್ಚಿಸಿದರು.
ಕೇಂದ್ರ-ರಾಜ್ಯಗಳಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. 3 ವಾರಗಳ ಒಳಗೆ ಸಂಸತ್ತಿನ ಸಭೆ ಸೇರುವ ನಿರೀಕ್ಷೆಯಿದೆ. ನಾವು ಒಂದು ಸಂವಾದ ಹೊಂದಿರಬೇಕೆಂದು ಭಾವಿಸಿದ್ದೇವೆ. ಇದರಿಂದ ಸಂಘಟಿತ ವಿಧಾನವನ್ನು ಹೊಂದಿದಂತಾಗುತ್ತದೆ. ಜಿಎಸ್ಟಿ ಪರಿಹಾರವು ದೊಡ್ಡ ವಿಷಯವೆಂಬಂತೆ ಕಾಣುತ್ತಿದೆ. ಸಂಸತ್ತು ಅಂಗೀಕರಿಸಿದ ಕಾನೂನುಗಳ ಪ್ರಕಾರ ರಾಜ್ಯಗಳಿಗೆ ಸಮಯಕ್ಕೆ ಸರಿಯಾಗಿ ಜಿಎಸ್ಟಿ ಪರಿಹಾರ ನೀಡಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಬಾಕಿ ಸಂಗ್ರಹವಾಗಿದೆ ಎಲ್ಲಾ ರಾಜ್ಯಗಳ ಹಣಕಾಸು ಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸೋನಿಯಾ ಹೇಳಿದರು.
2020ರ ಆಗಸ್ಟ್ 11ರಂದು ನಡೆದ ಹಣಕಾಸು ಸ್ಥಾಯಿ ಸಮಿತಿಯ ಸಭೆಯಲ್ಲಿ ಹಣಕಾಸು ಕಾರ್ಯದರ್ಶಿ ಕೇಂದ್ರ ಸರ್ಕಾರವು ಪ್ರಸಕ್ತ ವರ್ಷಕ್ಕೆ ಶೇ 14ರಷ್ಟು ಕಡ್ಡಾಯ ಪರಿಹಾರ ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯಗಳಿಗೆ ಪರಿಹಾರ ನೀಡಲು ನಿರಾಕರಿಸಿದ್ದು, ನರೇಂದ್ರ ಮೋದಿ ಸರ್ಕಾರದ ಕಪಟ ನಡೆಯಾಗಿದೆ. ದೇಶದ ಜನರಿಗೆ ದ್ರೋಹ ಎಸಗಿದ್ದಕ್ಕಿಂತ ಕಡಿಮೆಯಿಲ್ಲ ಎಂದು ಅಣಕಿಸಿದರು.
ಸಹಕಾರಿ ಒಕ್ಕೂಟದ ಉದಾಹರಣೆಯಾಗಿ ಜಿಎಸ್ಟಿ ಜಾರಿಗೆ ಬಂದಿದೆ. ರಾಜ್ಯಗಳೊಂದಿಗೆ ಹಂಚಿಕೊಳ್ಳದ ಏಕಪಕ್ಷೀಯ ಸೆಸ್‌ಗಳಿಂದ ಕೇಂದ್ರ ಸರ್ಕಾರವು ಲಾಭವನ್ನು ಮುಂದುವರಿಸುತ್ತಿದೆ ಎಂದು ಆರೋಪಿಸಿದರು.
ಕೃಷಿ ಮಾರುಕಟ್ಟೆ ಕುರಿತು ರಾಜ್ಯಗಳನ್ನು ಸಂಪರ್ಕಿಸದೆ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ. ಪರಿಸರ ಸಂರಕ್ಷಣೆ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಪರಿಸರ ಪರಿಣಾಮದ ನಿರ್ಧರಣೆ (ಇಐಎ) ಅಧಿಸೂಚನೆ ಪ್ರಜಾಪ್ರಭುತ್ವ ವಿರೋಧಿ ಎಂದು ಕರೆಯಲಾಗಿದೆ. ಕರಡು ಇಐಎ ಅಧಿಸೂಚನೆ 2020ರ ವಿರುದ್ಧ ರಾಷ್ಟ್ರೀಯ ಆಕ್ರೋಶ ವ್ಯಕ್ತವಾಗಿದೆ ಎಂದು ಸೋನಿಯಾ ಹೇಳಿದರು.
ದಶಕಗಳಿಂದ ಸೃಷ್ಟಿಯಾದ ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. 6 ವಿಮಾನ ನಿಲ್ದಾಣಗಳನ್ನು ಖಾಸಗಿ ಕೈಗೆ ನೀಡಲಾಗಿದೆ ಮತ್ತು ರೈಲ್ವೆ ಸಹ ಖಾಸಗೀಕರಣಗೊಳ್ಳುತ್ತಿದೆ ಎಂದರು.
ಗಾಂಧಿ ಹೊಸ ಶಿಕ್ಷಣ ನೀತಿಯನ್ನು ಪ್ರಗತಿಪರ, ಜಾತ್ಯತೀತ ಮತ್ತು ವೈಜ್ಞಾನಿಕ ಮೌಲ್ಯಗಳಿಗೆ ಹಿನ್ನಡೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದ ಪ್ರಕಟಣೆಗಳು ನಿಜವಾಗಿಯೂ ಹಿನ್ನಡೆಯಾಗಿರುವುದರಿಂದ ನಾವು ಈ ಬಗ್ಗೆ ಚಿಂತೆ ಮಾಡಬೇಕಿದೆ ಎಂದು ಹೇಳಿದರು.