ನವದೆಹಲಿ: ಭಾರತೀಯ ಎಂಜಿನಿಯರ್ಗಳು 2020ರ ಜನವರಿ 8ರಿಂದ ಒಂದು ವಾರದ ಅವಧಿಯಲ್ಲಿ 534 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 534 ಕಿ.ಮೀ. ರಸ್ತೆ ನಿರ್ಮಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ. ಜನವರಿ 8ರಿಂದ ಪ್ರಾರಂಭವಾಗುವ ಕೊನೆಯ ವಾರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು (ಎನ್‌ಎಚ್‌ಗಳು) ತ್ವರಿತವಾಗಿ ನಿರ್ಮಿಸಲಾಗಿದೆ.
ಪ್ರಸಕ್ತ 2020-21ರ ಆರ್ಥಿಕ ವರ್ಷದಲ್ಲಿ ಸಚಿವಾಲಯವು 2020ರ ಏಪ್ರಿಲ್‌ನಿಂದ 2021ರ ಜನವರಿ 15 ನಡುವೆ 8,169 ಕಿ.ಮೀ ಎನ್‌ಎಚ್ ನಿರ್ಮಿಸಿದೆ. ಅಂದರೆ ದಿನಕ್ಕೆ ಸುಮಾರು 28.16 ಕಿ.ಮೀ ವೇಗದಲ್ಲಿ ನಿರ್ಮಾಣವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ 7,573 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಅದು ದಿನಕ್ಕೆ 26.11 ಕಿ.ಮೀ ವೇಗ ಹೊಂದಿತ್ತು. ಇಂತಹ ವೇಗದ ನಿರ್ಮಾಣ ಕಾರ್ಯದಿಂದಾಗಿ ಮಾರ್ಚ್ 31ರೊಳಗೆ 11,000 ಕಿ.ಮೀ. ನಿರ್ಮಾಣ ಗುರಿ ದಾಟಲು ಸಾಧ್ಯವಾಗಲಿದೆ ಎಂದು ಸಚಿವಾಲಯವು ವಿಶ್ವಾಸ ಹೊಂದಿದೆ.
ಇದನ್ನೂ ಓದಿ: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್.. ಮೊಬೈಲ್ ಮೇಲೆ ₹10,000 ಕಡಿತ, ಬೇರೆ ಏನೆಲ್ಲ ಆಫರ್?
2019-20ರಲ್ಲಿ 8,948 ಕಿ.ಮೀ ರಸ್ತೆ ಯೋಜನೆಗಳನ್ನು ನೀಡಲಾಗಿದ್ದರೆ, 10,237 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಪ್ರಸಕ್ತ ಹಣಕಾಸಿನ ಮೊದಲ ಎರಡು ತಿಂಗಳು ಕಳೆದುಹೋಗಿವೆ ಎಂಬ ಅಂಶವನ್ನು ಗಮನಿಸಿದರೆ ಈ ಸಾಧನೆಯು ಮಹತ್ವ ಪಡೆದುಕೊಳ್ಳುತ್ತದೆ.
ನಿರ್ಮಾಣದ ವೇಗವನ್ನು ಹೆಚ್ಚಿಸಲು ಸಚಿವಾಲಯ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ನಿರ್ಮಾಣದ ವೇಗವು ಪ್ರಸಕ್ತ ಹಣಕಾಸು ವರ್ಷದ ಉಳಿದ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ನಿರ್ಮಾಣ ಚಟುವಟಿಕೆಗಳಿಗೆ ಅನುಕೂಲಕರವಾಗಿದೆ ಎಂದು ಸಚಿವಾಲಯ ಹೇಳಿದೆ.