ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ನಿವ್ವಳ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಸರ್ಕಾರದ ಅಧಿಕೃತ ದತ್ತಾಂಶಗಳು ತಿಳಿಸಿವೆ.
ಉತ್ಪಾದನಾ ಕ್ಷೇತ್ರದಲ್ಲಿನ ತೀವ್ರ ಕುಸಿತ ಮತ್ತು ಕೃಷಿ ಉತ್ಪಾದನೆಯು ಮಂದಗತಿಯಿಂದಾಗಿ 2019-20ರ ಜುಲೈ-ಸೆಪ್ಟಂಬರ್ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ 4.5ಕ್ಕೆ ಇಳಿದಿದೆ ಎಂದು ಇಂದು ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
2012-13ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಹಿಂದಿನ ಶೇ. 4.3 ರಷ್ಟಿದೆ. ದೇಶಿ ಅಂಶಗಳಾದ ನಿರುದ್ಯೋಗ ದರ, ಸರಕುಗಳ ಕಡಿಮೆ ಬಳಕೆ ಮತ್ತು ಬ್ಯಾಂಕ್ಗಳ ಎನ್‌ಪಿಎ ಏರಿಕೆ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರದ ಉದ್ವಿಗ್ನತೆಯೂ ಭಾರತದ ಆರ್ಥಿಕತೆಯ ಬಗ್ಗೆ ಕಳವಳಕ್ಕೆ ಕಾರಣವಾಗಿದೆ.
ಎರಡನೇ ತ್ರೈಮಾಸಿಕ ಬೆಳವಣಿಗೆ ದರವು 2020ರ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 5ಕ್ಕಿಂತ ಕಡಿಮೆಯಿರಲಿದೆ ಎಂದು ವಿವಿಧ ವರದಿಗಳು, ಏಜೆನ್ಸಿಗಳು ಮತ್ತು ತಜ್ಞರು ಅಂದಾಜಿಸಿದ್ದರು.
ಜಿಡಿಪಿ ಕುಸಿದರೇ ದೇಶದ ಉತ್ಪಾದನಾ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ಇದರ ಪರಿಣಾಮ ಉದ್ಯಮಗಳು ನಷ್ಟ ಹೊಂದಿ ಮುಚ್ಚಲ್ಪಡುತ್ತವೆ. ಪರೋಕ್ಷವಾಗಿ ಸಂಸ್ಥೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರತ್ತ ಪರಿಣಾಮ ಬೀರಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಜನರ ಮಾಸಿಕ ತಲಾದಾಯ ಕಡಿಮೆಯಾಗಿ ಆರ್ಥಿಕ ಸಂಕಷ್ಟ ಕಾಡುತ್ತದೆ. ಜಿಡಿಪಿಯ ಶ್ರೇಯಾಂಕ ಮತ್ತಷ್ಟು ಕುಸಿಯುವಂತೆ ಮಾಡುತ್ತದೆ.