ನವದೆಹಲಿ: ಡೇಟಾ ಗೌಪ್ಯತೆ ಕಾಳಜಿ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಲ್ಲೇಖಿಸಿ ಜನಪ್ರಿಯ ವಿಡಿಯೋ ಗೇಮಿಂಗ್ ಪಬ್ಜಿ ಸೇರಿದಂತೆ ಚೀನಾದ ಲಿಂಕ್ ಹೊಂದಿರುವ 118 ಮೊಬೈಲ್ ಅಪ್ಲಿಕೇಷನ್‌ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ.
ಶುಕ್ರವಾರದವರೆಗೆ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಗುರುವಾರ ರಾತ್ರಿಯವರೆಗೆ ಡೌನ್‌ಲೋಡ್ ಮಾಡಲು ಲಭ್ಯವಿದ್ದ ಪಬ್ಜಿ ಮೊಬೈಲ್ ಮತ್ತು ಪಬ್ಜಿ ಮೊಬೈಲ್ ಲೈಟ್ ಅಪ್ಲಿಕೇಷನ್ ಅನ್ನು ತೆಗೆದುಹಾಕಲಾಗಿದೆ.
ಕೇಂದ್ರ ಸರ್ಕಾರ ಇತ್ತೀಚಿಗೆ ನಿಷೇಧಿಸಿದ್ದ ಆ್ಯಪ್ಗಳು ಸೇರಿ ಈವರೆಗೆ ನಿಷೇಧಿಸಿರುವ ಚೀನಾ ಸಂಬಂಧಿತ ಮೊಬೈಲ್ ಅಪ್ಲಿಕೇಷನ್‌ಗಳ ಒಟ್ಟು 224ಕ್ಕೆ ಏರಿಕೆಯಾಗಿದೆ.
ಬುಧವಾರ ನಿಷೇಧಿಸಲಾದ ಅಪ್ಲಿಕೇಷನ್‌ಗಳಲ್ಲಿ ಬೈದು, ಬೈದು ಎಕ್ಸ್‌ಪ್ರೆಸ್, ಅಲಿಪೇ, ಟೆನ್ಸೆಂಟ್ ವಾಚ್‌ಲಿಸ್ಟ್, ಫೇಸ್‌ಯು, ವೀಚಾಟ್ ಮೆಸ್ಸೆಂಜರ್, ಸರ್ಕಾರಿ ವೀಚಾಟ್, ಟೆನ್ಸೆಂಟ್ ವೀಯುನ್, ಎಪಿಯುಎಸ್ ಲಾಂಚರ್ ಪ್ರೊ, ಎಪಿಯುಎಸ್ ಸೆಕ್ಯೂರಿಟಿ, ಕಟ್ ಕಟ್, ಶಿಯೋಮಿಯ ಶೇರ್‌ಸೇವ್, ಕ್ಯಾಮ್‌ಕಾರ್ಡ್, ಪಬ್ಜಿ ಮೊಬೈಲ್ ಮತ್ತು ಪಬ್ಜಿ ಮೊಬೈಲ್ ಲೈಟ್ ಸೇರಿ 118 ಆ್ಯಪ್ಗಳಿವೆ.
ಬಳಕೆದಾರರ ಡೇಟಾವನ್ನು ಭಾರತದ ಹೊರಗಿನ ಸರ್ವರ್‌ಗಳಿಗೆ ಕದ್ದು ರಹಸ್ಯವಾಗಿ ರವಾನಿಸಲಾಗುತ್ತಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಕೆಲವು ಮೊಬೈಲ್ ಅಪ್ಲಿಕೇಷನ್‌ಗಳ ದುರುಪಯೋಗದ ಕುರಿತು ಹಲವು ವರದಿಗಳು ಒಳಗೊಂಡು ವಿವಿಧ ಮೂಲಗಳಿಂದ ಐಟಿ ಸಚಿವಾಲಯಕ್ಕೆ ನಾನಾ ದೂರುಗಳು ಬಂದಿದ್ದವು.