ನವದೆಹಲಿ: ಸಾರ್ವಜನಿಕ ವಲಯದ (ಪಿಎಸ್ಯು) ಬ್ಯಾಂಕ್ಗಳು ಹಬ್ಬದ ಅವಧಿಯ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ₹4.91 ಲಕ್ಷ ಕೋಟಿ ರೂ.ಯಷ್ಟು ಸಾಲ ವಿತರಣೆ ಮಾಡಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಸಾಲ ಬಳಕೆ ಹೆಚ್ಚಿಸಲು ಮತ್ತು ಆರ್ಥಿಕತೆಯಲ್ಲಿ ಸುಧಾರಣೆ ತರುವ ಪ್ರಯತ್ನವಾಗಿ ಹಣಕಾಸು ಸಚಿವರು ಸೆಪ್ಟಂಬರ್‌ನಲ್ಲಿ ಬ್ಯಾಂಕ್ಗಳಿಗೆ ಸಾಲ ಮೇಳ ಆಯೋಜಿಸುವಂತೆ ಸೂಚಿಸಿದ್ದರು. ಅವರ ನಿರ್ದೇಶನದ ಮೇರೆಗೆ ಪಿಎಸ್ಯು ಬ್ಯಾಂಕ್ಗಳು ದೇಶಾದ್ಯಂತ 374 ಜಿಲ್ಲೆಗಳಲ್ಲಿ ಸಾಲ ಮೇಳಗಳನ್ನು ಆಯೋಜಿಸಿ ಎಂಎಸ್ಎಂಇ, ಚಿಲ್ಲರೆ ವರ್ತಕರು ಮತ್ತು ಕೃಷಿಕರಿಗೆ ಸಾಲ ನೀಡಲಾಯಿತು. ಇದರ ಪರಿಣಾಮವಾಗಿ ಈ ಎರಡೂ ತಿಂಗಳಲ್ಲಿ ಸಾಲ ವಿತರಣೆಯ ಪ್ರಮಾಣವು ಹೆಚ್ಚಳವಾಗಿದೆ.
ಅಕ್ಟೋಬರ್ನಲ್ಲಿ ಬ್ಯಾಂಕ್ಗಳು 2.52 ಲಕ್ಷ ಕೋಟಿ ರೂ. ಹಾಗೂ ನವೆಂಬರ್ನಲ್ಲಿ ₹ 2.39 ಲಕ್ಷ ಕೋಟಿ ಸಾಲ ವಿತರಿಸಿವೆ. ಒಟ್ಟಾರೆಯಾಗಿ ವಿವಿಧ ಕ್ಷೇತ್ರಗಳಿಗೆ ವಿತರಿಸಿದ ಸಾಲದ ಮೊತ್ತ 4.91 ಲಕ್ಷ ಕೋಟಿ ರೂ.ಯಷ್ಟಿದೆ ಎಂದು ಸಚಿವ ಸಂಪುಟದ ಸಭೆಯ ಬಳಿಕ ಸೀತಾರಾಮನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.