ನವದೆಹಲಿ: ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯನ್ನು ಆದಾಯ ತೆರಿಗೆ ಇಲಾಖೆಯು 2020ರ ಜೂನ್ 30ಕ್ಕೆ ನಿಗದಿಪಡಿಸಿದೆ.
ಜನರ ಸುರಕ್ಷತೆಯನ್ನು ಕೇಂದ್ರ ಸರ್ಕಾರ ಗಮನದಲ್ಲಿ ಇರಿಸಿಕೊಂಡು ಪಾನ್- ಆಧಾರ್ ಜೋಡಣೆಗೆ ಕೋರಿಕೊಂಡು ಬರುತ್ತಿದೆ. ಲಾಕ್ಡೌನ್ ಹಾಗೂ ಇತರೆ ಕಾರಣಗಳಿಂದ ಇದುವರೆಗೂ 10 ಅಂತಿಮ ಗಡುವು ಮುಂದೂಡಲಾಗಿದೆ. ಬಹುತೇಕ ಕಾರ್ಡ್ದಾರರು ಜೋಡಣೆಗೆ ಹಿಂದೇಟು ಹಾಕುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಟಿ ಇಲಾಖೆ, ಜೋಡಣೆಯನ್ನು ಕಡೆಗಣಿಸಿದವರಿಗೆ 10,000 ರೂ.ವರೆಗೂ ದಂಡ ಹಾಕುವುದಾಗಿ ಈ ಹಿಂದೆ ಆದಾಯ ತೆರಿಗೆ ಇಲಾಖೆ ಎಚ್ಚರಿಸಿತ್ತು.
ನಿಗದಿತ ಅವಧಿಯ ಬಳಿಕ ಜೋಡಣೆ ಆಗದಿದ್ದರೆ ಮೊದಲು ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದೇ ಕಾರ್ಡ್ ಅನ್ನು ವಹಿವಾಟಿಗೆ ಬಳಿಸಿಕೊಂಡರೆ ಬಳಕೆದಾರರು 10,000 ರೂ.ವರೆಗೂ ದಂಡ ಕಟ್ಟಬೇಕಾಗುತ್ತದೆ ಎಂದು ಐಟಿ ಇಲಾಖೆ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿತ್ತು.
ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅಗತ್ಯವಿರುವ ವ್ಯವಹಾರಗಳು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕಾರ್ಡ್ ತನ್ನ ಮೌಲ್ಯ ಕಳೆದುಕೊಳ್ಳುವ ಮುನ್ನ 12 ಸಂಖ್ಯೆ ಒಳಗೊಂಡ ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಅನ್ನು ಬ್ಯಾಂಕ್ ಖಾತೆಯ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಕಾರ್ಡ್) ಜೋಡಣೆಯ ವಿಧಾನ ಇಲ್ಲಿದೆ.
ಲಿಂಕ್ ಆಗಿದೆಯೇ ಎಂಬುದು ತಿಳಿಯುವುದು ಹೇಗೆ?
* ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ (https://www.incometaxindiaefiling.gov.in)
* ವೆಬ್‌ಸೈಟ್‌ನ ಹೋಮ್‌ಪೇಜ್‌ನ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ' ಎಂಬ ಅರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಕ್ಲಿಕ್ ಮಾಡಿ.
* ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಕ್ಲಿಕ್ ಮಾಡಿ. ಆಗ ನಿಮ್ಮ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶ ಕಾಣಿಸಲಿದೆ.
ಆಧಾರ್- ಪ್ಯಾನ್ ಲಿಂಕ್ ಮಾಡುವುದು ಹೇಗೆ?
* https://www.incometaxindiaefiling.gov.ingಗೆ ಭೇಟಿ ನೀಡಿ.
* ಮುಖಪುಟದ ಎಡಭಾಗದಲ್ಲಿನ ಕೆಂಪು ಅಕ್ಷರದ ಲಿಂಕ್ ಆಧಾರ್ (Link Aadhar) ಆಯ್ಕೆ ಕ್ಲಿಕ್ ಮಾಡಿ
* ಲಿಂಕ್ ಆಧಾರ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
* ಡೈಲಾಗ್ ಬಾಕ್ಸ್ನಲ್ಲಿ ಸೂಚಿಸಲಾದ ಪ್ಯಾನ್ ನಂ, ಆಧಾರ್ ನಂಬರ್, ಆಧಾರ್ ಕಾರ್ಡ್ನಲ್ಲಿ ನಮೂದಿತ ಹೆಸರು ಭರ್ತಿ ಮಾಡಿ.
*ಕ್ಯಾಪ್ಚ ಕೋಡ್ ಸಂಖ್ಯೆ ನಮೂದಿಸಿ: (ದಿವ್ಯಾಂಗರಿಗೆ ಓಟಿಪಿ ನಂಬರ್ ಪಡೆಯುವ ಅವಕಾಶವಿದೆ)
* ಹಸಿರು ಪೆಟ್ಟಿಗೆಯಲ್ಲಿನ ಲಿಂಕ್ ಆಧಾರ್ (Link Aadhar) ಆಯ್ಕೆ ಮಾಡಿಕೊಂಡರೆ ಆಧಾರ್ ಜೋಡಣೆಯಾದ ಬಾಕ್ಸ್ ತೆರೆದುಕೊಳ್ಳುತ್ತದೆ.
ಎಸ್ಎಂಎಸ್ ಮುಖಾಂತರ ಆಧಾರ್ ಜೋಡಣೆ
* ಅಂತರ್ಜಾಲ ಸಂಪರ್ಕವಿಲ್ಲದೇ ಮೊಬೈಲ್ ಎಸ್ಎಂಎಸ್ ಬಳಸಿ ಪ್ಯಾನ್-ಆಧಾರ್ ಜೋಡಣೆ ಮಾಡಬಹುದು. ಆಧಾರ್ನ 12 ವಿಶಿಷ್ಟ ಸಂಖ್ಯೆಗಳನ್ನು 567678 ಅಥವಾ 56161ಗೆ ಸಂದೇಶ ರವಾನಿಸಬಹುದು.
ಸಂದೇಶ ಕಳುಹಿಸುವ ವಿಧಾನ
ಯುಐಡಿಪ್ಯಾನ್<ಸ್ಥಳ>12 ವಿಶೇಷ ಸಂಖ್ಯೆಗಳು<ಸ್ಥಳ>ಪ್ಯಾನ್ 10 ವಿಶೇಷ ಸಂಖ್ಯೆಗಳು
UIDPAN<space>12-digit Aadhaar><space>10-digit PAN
ಉದಾ: UIDPAN 444455556666 BBUDA8686Q