ನವದೆಹಲಿ: ವಿದೇಶಿ ಬ್ಯಾಂಕ್ಗಳಲ್ಲಿ ಭಾರತೀಯರು ಕೂಡಿಟ್ಟ ಕಪ್ಪು ಹಣದ ಬಗ್ಗೆ ಸ್ಪಷ್ಟವಾದ ಯಾವುದೇ ದತ್ತಾಂಶಗಳು ಕೇಂದ್ರ ಸರ್ಕಾರ ಅಥವಾ ಖಾಸಗಿ ಸಂಸ್ಥೆಯ ಬಳಿ ಇಲ್ಲವೆಂದು ತಿಳಿದು ಬಂದಿದೆ.
ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಠೇವಣಿ ಇಟ್ಟ ಮೊತ್ತವು ಕಡಿಮೆಯಾಗಿದೆ ಎಂಬುದರ ಬಗ್ಗೆ ಯಾವುದೇ ದತ್ತಾಂಶವನ್ನು ನಾವು ಹೊಂದಿಲ್ಲ. ಆದರೂ ಕಪ್ಪು ಹಣದ ಸಮಸ್ಯೆ ಬಗೆಹರಿಸುವುದು ಕೇಂದ್ರ ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿದೆ. ಮಾಹಿತಿಯ ಕೊರತೆಯ ಹೊರತಾಗಿಯೂ ಕಪ್ಪುಹಣವನ್ನು ನಿಗ್ರಹಿಸಲು ಆದಾಯ ತೆರಿಗೆ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಸ್ವತ್ತುಗಳು) ಮತ್ತು ತೆರಿಗೆ ವಿಧಿಸುವ ಕಾಯ್ದೆ 2015ರ ಕಾಯ್ದೆ 2015ರ ಜುಲೈ 1ರಿಂದ ಜಾರಿಗೆ ಬಂದಾಗಿನಿಂದಲೂ ಆದಾಯ ತೆರಿಗೆ ಇಲಾಖೆ ನಿರಂತರ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಂಡಿದೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
2019ರ ಅಂತ್ಯದ ವೇಳೆಗೆ ಈ ಕಾಯ್ದೆಯಡಿ 422 ಪ್ರಕರಣ ದಾಖಲಾಗಿದ್ವು. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದ್ದು, ಬಹಿರಂಗಪಡಿಸದ ವಿದೇಶಿ ಆಸ್ತಿಗಳು ಮತ್ತು 12,600 ಕೋಟಿ ರೂ. ಆದಾಯ ಒಳಗೊಂಡಿದೆ ಎಂದಿದ್ದಾರೆ.
2014ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಈಗಿನ ಪ್ರಧಾನಿ ಮೋದಿ ಅವರು ಸ್ವಿಸ್ ಬ್ಯಾಂಕ್ನಿಂದ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ಟೀಕಿಸಿದ್ದವು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್, 'ಪ್ರಧಾನಿ ಮೋದಿ 15 ಲಕ್ಷ ರೂ. ಬರುತ್ತೆ ಅಂತಾ ಹೇಳಿರಲಿಲ್ಲ. ಕಪ್ಪು ಹಣದ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳುವುದಾಗಿ ಹೇಳಿದ್ದರು' ಎಂದು ಸ್ಪಷ್ಟನೆ ನೀಡಿದ್ದರು.