ನವದೆಹಲಿ: ಹಳೆಯ ವಾಹನಗಳ ಮೇಲೆ 'ಹಸಿರು ತೆರಿಗೆ' ವಿಧಿಸುವ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ.
ಅನರ್ಹ ಮತ್ತು ಮಾಲಿನ್ಯ ಉಂಟುಮಾಡುವ ವಾಹನಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಮೂಲಕ ಪರಿಸರ ಸ್ವಚ್ಛಗೊಳಿಸುವ ಆಲೋಚನೆಯಿದೆ. ಹಸಿರು ತೆರಿಗೆ ಮೂಲಕ ಸಂಗ್ರಹಿಸಿದ ಆದಾಯವನ್ನು ಮಾಲಿನ್ಯ ನಿಭಾಯಿಸಲು ಬಳಸಲಾಗುತ್ತದೆ. ಔಪಚಾರಿಕವಾಗಿ ಈ ಬಗ್ಗೆ ತಿಳಿಸುವ ಮೊದಲು ಅದರ ಪ್ರಸ್ತಾವನೆ ರೂಪದಲ್ಲಿರುವ ಕರಡು ಪ್ರಸ್ತಾವನೆಯನ್ನು ಎಲ್ಲಾ ರಾಜ್ಯಗಳಿಗೆ ಸಮಾಲೋಚನೆಗಾಗಿ ಕಳುಹಿಸಲಾಗುತ್ತದೆ.
ಹಳೆಯ ವಾಹನಗಳನ್ನು ಬಳಸದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ತಡೆದು ಹೊಸ ಮತ್ತು ಕಡಿಮೆ ಮಾಲಿನ್ಯಕಾರಕ ವಾಹನಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. 15 ವರ್ಷಕ್ಕಿಂತ ಹಳೆಯದಾದ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಪಿಎಸ್ಯುಗಳ ಒಡೆತನದ ಕಾರುಗಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ. ಸರ್ಕಾರಿ ವಾಹನಗಳ ಗುಜರಿ ನೀತಿ 2022ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜನ್ಮ ತಳೆದ ಸೈನಿಕರ ಜೀವನ ಕಥೆಯ 'ಫೌಜಿ' ಗೇಮ್ ಲಾಂಚ್.. ಯಾವೆಲ್ಲ ಫೋನ್ಗೆ ಸೂಕ್ತ?
ಫಿಟ್‌ನೆಸ್ ಪ್ರಮಾಣಪತ್ರ ನವೀಕರಣದ ಸಮಯದಲ್ಲಿ ಎಂಟು ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಹಸಿರು ತೆರಿಗೆ ವಿಧಿಸಬಹುದು ಎಂದು ಪ್ರಸ್ತಾದಲ್ಲಿದೆ. ಈ ಮೊತ್ತವು ರಸ್ತೆ ತೆರಿಗೆಯ ಶೇ. 10ರಿಂದ 25ರವರೆಗೆ ಇರಬಹುದು. ಪರ್ಸನಲ್ ವಾಹನಗಳನ್ನು 15 ವರ್ಷಗಳ ನಂತರ ನೋಂದಣಿ ಪ್ರಮಾಣಪತ್ರ ನವೀಕರಿಸುವ ವೇಳೆ ಗ್ರೀನ್ ತೆರಿಗೆ ವಿಧಿಸಬಹುದು. ಹೆಚ್ಚು ಕಲುಷಿತ ನಗರಗಳಲ್ಲಿ ವಾಹನ ಮರು ನೋಂದಣಿಯ ಹಸಿರು ತೆರಿಗೆಯ ಶೇ. 50ರಷ್ಟು ರಸ್ತೆ ತೆರಿಗೆಗೆ ಹೋಗಬಹುದು.
ಬಳಸಿದ ಇಂಧನ ಮತ್ತು ವಾಹನದ ಮಾಡಲ್ ಅವಲಂಬಿಸಿ ತೆರಿಗೆ ಸ್ಲ್ಯಾಬ್ ಭಿನ್ನವಾಗಿರುತ್ತದೆ ಎಂದು ಪ್ರಸ್ತಾಪ ಸೂಚಿಸುತ್ತದೆ. ಹೈಬ್ರಿಡ್, ಎಲೆಕ್ಟ್ರಿಕ್ ವಾಹನ ಮತ್ತು ಸಿಎನ್‌ಜಿ, ಎಥೆನಾಲ್, ಎಲ್‌ಪಿಜಿಯಂತಹ ಪರ್ಯಾಯ ಇಂಧನಗಳನ್ನು ಬಳಸುವ ವಾಹನಗಳಿಗೆ ವಿನಾಯಿತಿ ನೀಡುವ ಸಾಧ್ಯತೆಯಿದೆ. ಟ್ರ್ಯಾಕ್ಟರ್, ಹಾರ್ವೆಸ್ಟರ್, ಟಿಲ್ಲರ್ ಮುಂತಾದ ಕೃಷಿ ಸಂಬಂಧಿ ವಾಹನಗಳಿಗೂ ವಿನಾಯಿತಿ ನೀಡುವ ಸಾಧ್ಯತೆಯಿದೆ.