ನವದೆಹಲಿ : ಲಡಾಖ್ ಗಡಿ ವ್ಯಾಪ್ತಿಯಲ್ಲಿ ಚೀನಾ ಉದ್ಧಟತನ ನಡೆ ಪ್ರದರ್ಶಿದ ಬಳಿಕ ದೇಶದಲ್ಲಿ ಚೀನಿ ವಸ್ತುಗಳ ನಿಷೇಧ ಅಭಿಯಾನ ತಾರಕಕ್ಕೇರಿದೆ. ಪ್ರತಿ ಸರಕುಗಳ ಮೇಲೆ 'ಮೂಲ ದೇಶದ ಮಾಹಿತಿ' ಹಂಚಿಕೊಳ್ಳಬೇಕು ಎಂಬ ಕೂಗು ದಟ್ಟವಾಗಿ ಕೇಳಿ ಬಂತು.
ಆತ್ಮ ನಿರ್ಭಾರ ಭಾರತ ಅಭಿಯಾನ ಘೋಷಣೆ ಆಗುತ್ತಿದ್ದಂತೆ ದೇಶಿ ಸರಕುಗಳು ಮತ್ತು ತಯಾರಕರತ್ತ ಜನತೆಯ ಒಲವು ಹೆಚ್ಚುತ್ತಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ 'ಮೂಲ ದೇಶ ಮಾಹಿತಿ' ಎಂಬ ಪ್ರಸ್ತಾಪ ಕಡ್ಡಾಯಗೊಳಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ.
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಬುಧವಾರ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ಕೋರಿದೆ.
ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಡಿಪಿಐಐಟಿ ಕಾರ್ಯದರ್ಶಿ ಗುರುಪ್ರಸಾದ್ ಮೊಹಾಪಾತ್ರ ಅವರು, ಈ ವಿಷಯವು ಸಚಿವಾಲಯದ ಪರಿಗಣನೆಯಲ್ಲಿದೆ. ಏಕೆಂದರೆ, ಇದು 'ಮೇಕ್ ಇನ್ ಇಂಡಿಯಾ' ದೃಷ್ಟಿಗೆ ಅನುಗುಣವಾಗಿದೆ ಮತ್ತು ಉತ್ಪನ್ನವು ಎಲ್ಲಿಂದ ಬಂದಿದೆ ಎಂದು ಗ್ರಾಹಕರಿಗೆ ತಿಳಿದರೆ ಹೆಚ್ಚಿನ ಆಯ್ಕೆ ನೀಡಿದಂತೆ ಆಗುತ್ತದೆ ಎಂದಿದ್ದಾರೆ.
ಇನ್ನೂ ಯಾವುದೇ ಸಲಹೆ ಅಥವಾ ನಿರ್ದೇಶನ ನೀಡಿಲ್ಲ. ಈ ವಿಷಯವನ್ನು ಉದ್ಯಮಿಗಳ ಜತೆ ಮಾತ್ರ ಚರ್ಚಿಸಲಾಗಿದೆ. ಸರಿಯಾದ ಪರಿಗಣನೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.