ನವದೆಹಲಿ: ಅದು ರಾಷ್ಟ್ರ ರಾಜಧಾನಿ ದೆಹಲಿ. ಸದಾ ಮೋಟಾರು ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿವೆ. ಲಾಕ್ಡೌನ್ಗೆ ಕ್ಯಾಪಿಟಲ್ ಸಿಟಿ ಅಭೂತಪೂರ್ವ ಸಹಕಾರ ಕೊಡುತ್ತಿದೆ ಎಂಬಂತೆ ಮೇಲ್ನೋಟಕ್ಕೆ ಕಂಡರೂ ಒಡಲೊಳಗೆ ವಲಸಿಗ ಕಾರ್ಮಿಕರ ಹಸಿವಿನ ಆಕ್ರಂದನೆ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲವೇನೋ..?
ಕೊರೊನಾ ವೈರಸ್ ಒಂದೇ ಏಟಿಗೆ ದಿನಗೂಲಿ ಕಾರ್ಮಿಕರ ಬದುಕನ್ನು ಛಿದ್ರಗೊಳಿಸಿದೆ. ದಿಗ್ಬಂಧನದ ಮುಷ್ಠಿಗೆ ಸಿಲುಕಿದ ಅವರ ಜೀವನ, ಅತ್ತ ಹುಟ್ಟಿದ ಊರಿಲ್ಲದೇ, ಇತ್ತ ಅನ್ನ ಕೊಟ್ಟು ಪೊರೆಯಬೇಕಿದ್ದ ನಗರದ ದುಡಿಮೆ ಇಲ್ಲದೆ ಇಕ್ಕಳದಲ್ಲಿ ಸಿಲುಕಿದ ಅಡಕೆಯಂತ್ತಾಗಿ ಇಬ್ಭಾಗವಾಗುತ್ತಿದೆ.
ಕುಟುಂಬಗಳು ಆತಂಕದಿಂದ ಭಯಭೀತರಾದ ಸಾವಿರಾರು ಕಾರ್ಮಿಕರು ಮನೆಗೆ ಹಿಂದುರುಗಲು ಎದುರುನೋಡುತ್ತಿದ್ದಾರೆ. ಆದರೆ, ಅದು ಅಂದುಕೊಂಡಷ್ಟು ಸುಲಭವಲ್ಲ. ಇಡೀ ಸಂಚಾರ ವ್ಯವಸ್ಥೆ ಹಾಸಿಗೆ ಹೊದ್ದು ಮಲಗಿದೆ. ಲಾಕ್ಡೌನ್ನ ಮೂರು ವಾರ ಕಳೆದೋಗಿದೆ. ಒಂದಿಷ್ಟು ಜನ ತಮ್ಮ ಹಳ್ಳಿಗಳಿಗೆ ಮರಳುವ ಬಗ್ಗೆ ಯೋಚಿಸುತ್ತಿದ್ದಾರೆ. ಇನ್ನೊಂದು ಮೂರು ವಾರ ಹೇಗೋ ಬದುಕು ನೂಕಿದರೆ ಸಂಕಷ್ಟದಿಂದ ಪಾರಾಗಿ ಇಲ್ಲೇ ನೆಲೆ ಕಂಡುಕೊಳ್ಳಬಹದೆಂದು ಮತ್ತೊಂದಿಷ್ಟು ಜನ, ಕಷ್ಟು ನಷ್ಟವುಂಡು ಇಲ್ಲಿಯೇ ಉಳಿಯುವ ಚಿಂತನೆಯಲ್ಲಿದ್ದಾರೆ.
ಕೊರೊನಾ ವೈರಸ್ ಹಬ್ಬುವುದನ್ನು ತಡೆಯಲು ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಕೂಡಿಟ್ಟ ನಾಲ್ಕು ಕಾಸಿನಲ್ಲಿ ಎರಡು ಕಾಸು ಈಗಾಗಲೇ ಖಾಲಿ ಆಗಿದೆ. ಮಿಕ್ಕ ಎರಡು ಕಾಸು ಇಂದಿಲ್ಲ- ನಾಳೆ ಉಳಿಯಲ್ಲ. ಮುಂದೆ ಹೇಗೆ ಎಂಬ ಆತಂಕ ವೈರಸ್ನಿಂದ ಬರಲಿರುವ ಸಾವಿಗಿಂತ ಘೋರವಾಗಿ ಅವರನ್ನು ಕಾಡುತ್ತಿರಬಹುದು.
ಅನಿಲ್ ಯಾದವ್. ಈತ ರೈಲ್ವೆಯ ಪಾರ್ಸೆಲ್ ವಿಭಾಗದಲ್ಲಿ ನಿತ್ಯದ ಸಣ್ಣ ಪುಟ್ಟ ಕೆಲಸ ಮಾಡಿ ದುಡಿಯುತ್ತಿದ್ದ. ರೈಲ್ವೆ ಬಂಡಿಗಳು ಸ್ಥಗಿತವಾಗಿವೆ. ಅವನ್ನು ಶ್ರಮ, ಗಳಿಕೆ, ಉಳಿಕೆ, ಬದುಕು ಕೂಡ ಸ್ತಬ್ಧವಾಗಿದೆ. ಇದೆಲ್ಲವನ್ನೂ ಬಿಟ್ಟು ಸ್ವಗ್ರಾಮದಲ್ಲಿ ಗೋಧಿ ಕೊಯ್ಲು ಮಾಡಲು ಹೊರಡಲು ಕೂಡ ಆಗುತ್ತಿಲ್ಲ. ಅಸಹಾಯಕನಾಗಿ ಕೈಕಟ್ಟಿ ಕುಳಿತಿದ್ದಾನೆ. ಇಲ್ಲಿಯೇ ಕುಳಿತಿದ್ದಾನೆ.
ನನ್ನ ಒಂದು ಎಕರೆ ಭೂಮಿಯಲ್ಲಿ ಬಿತ್ತಿದ ಕಬ್ಬಿನ ಬೆಳೆಯನ್ನು ನಾನು ಈಗಾಗಲೇ ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ಅದು ನನ್ನ ಕುಟುಂಬಕ್ಕೆ ಸ್ವಲ್ಪ ಹಣವನ್ನಾದರು ತಂದು ಕೊಡುತ್ತಿತ್ತು. ಅದು ಇಲ್ಲವಾಗಿದೆ. ಈಗ ನಾನು ಮನೆಗೆ ಹಿಂತಿರುಗಲು ಸಾಧ್ಯವಿಲ್ಲ, ಬೆಳೆ ಕೊಯ್ಲು ಮಾಡಲು ಸಾಧ್ಯವಿಲ್ಲ ಎಂದು 28 ವರ್ಷದ ಕಾರ್ಮಿಕ ಅಳಲು ಯಾರಿಗೂ ಕೇಳುತ್ತಿಲ್ಲ.
ನನ್ನ ಹೆಂಡತಿ, ಇಬ್ಬರು ಮಕ್ಕಳು ಮತ್ತು ವಯಸ್ಸಾದ ತಂದೆ- ತಾಯಿಯನ್ನು ಸಾಕಲು ನನಗೆ ಆಗುತ್ತಿಲ್ಲ. ನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಬರಲು ಸಹ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ನಮ್ಮ ಬಳಿ ಹಣವಿಲ್ಲದೆ ಇಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಅವಲತುಕೊಂಡರು.
ಕಾಂಪ್ಲೆಕ್ಸ್ ಮರದ ಕೆಳಗೆ ಕುಳಿತು ದಾಲ್ ರೈಸ್ ಅನ್ನು ಬಹು ಆತಂಕದಿಂದ ತಿನ್ನುತ್ತಿದ್ದ ಯಾದವ್ನ ಮುಖದಲ್ಲಿ ತನ್ನ ಕುಟುಂಬ ಭಾರಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆಯಲ್ಲಿ ಎಂಬ ಆತಂಕದ ಛಾಯೆ ಇನಿಲ್ಲದಂತೆ ಕಾಡುತ್ತಿತ್ತು.
ನಿತ್ಯ ಮನಗೆ ಹೋಗೋಣ ಎಂದು ಹೆಂಡತಿ, ಮಕ್ಕಳು, ತಾಯಿ- ತಂದೆ ಗೋಗೆರೆಯುತ್ತಾರೆ. ನಾನು ಏನೂ ಮಾಡಲು ಆಗದಷ್ಟು ಅಸಹಾಯಕನಾಗಿದ್ದೇನೆ. ದುಡಿಮೆ ಮಾಡಿ ತಿಂಗಳಿಗೆ ಏಳೋ- ಎಂಟೋ ಸಾವಿರ ರೂಪಾಯಿ ಉಳಿಸಿದ್ದೆ. ಆದರೆ, ಈಗ ಆ ಹಣ, ಕೆಲಸ ಎರಡೂ ಹೋಗಿದೆ. ಮನೆಗೆ ಹೋಗುವುದಾದರೂ ಹೇಗೆ? ಎನ್ನುತ್ತಾನೆ.
ದೆಹಲಿ ಸರ್ಕಾರವು ಆಶ್ರಯ ತಾಣವಾಗಿ ಮಾರ್ಪಡಿಸಿರುವ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಶಿಬಿರದಲ್ಲಿ ಉಳಿದುಕೊಂಡಿರುವ ಮನೆಯಿಲ್ಲದವರು ಮತ್ತು ವಲಸಿಗರ 330 ಜನರ ಗುಂಪಿನಲ್ಲಿ ಯಾದವ್ ಕೂಡ ಒಬ್ಬ.