ನವದೆಹಲಿ: ಹಿರಿಯ ಬ್ಯಾಂಕರ್ ಮತ್ತು ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ವಿ.ಕಾಮತ್ ಅವರು ಶೀಘ್ರದಲ್ಲೇ ಹಣಕಾಸು ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಬ್ರಿಕ್ಸ್ ಬ್ಯಾಂಕ್ ಮೊದಲು ಅಧ್ಯಕ್ಷರಾಗಿದ್ದ ಕೆ. ವಿ. ಕಾಮತ್ ಅವರು, ಎರಡನೇ ಅತಿದೊಡ್ಡ ಭಾರತೀಯ ಐಟಿ ಸೇವೆಗಳ ಕಂಪನಿಯಾದ ಇನ್ಫೋಸಿಸ್ ಅಧ್ಯಕ್ಷರಾಗಿ ಹಾಗೂ ಐಸಿಐಸಿಐ ಬ್ಯಾಂಕ್ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕುಸಿದ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತರಲು ಮೋದಿ ಟೀಂ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆ.ವಿ. ಕಾಮತ್ ಜೊತೆಗೆ ಬಲಪಂಥೀಯ ಒಲವು ಹೊಂದಿರುವ ಸ್ವಪನ್ ದಾಸ್‌ಗುಪ್ತಾ ಮತ್ತು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಕೂಡ ಸೇರ್ಪಡೆಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
2011ರ ಆಗಸ್ಟ್ 21 ರಂದು ಕಾಮತ್ ಅವರು ನಾರಾಯಣ ಮೂರ್ತಿ ಬಳಿಕ ಇನ್ಫೋಸಿಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 2015ರ ಜೂನ್ 15ರವರೆಗೆ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2010ರಿಂದ ಹ್ಯೂಸ್ಟನ್ ಮೂಲದ ತೈಲ ಸೇವೆಗಳ ಕಂಪನಿಯಾದ ಶ್ಲಂಬರ್ಗರ್ ಮತ್ತು ಭಾರತೀಯ ಔಷಧ ತಯಾರಕ 'ಲುಪಿನ್ ಫಾರ್ಮಾಚ್ಯುಟಿಕಲ್' ಕಂಪನಿ ಮಂಡಳಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ1947ರ ಡಿಸೆಂಬರ್ 2ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಕಾಮತ್ ಅವರು ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದು ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಹಮದಾಬಾದ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.