ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಗರಣದ ಮನಿ ಲಾಂಡರಿಂಗ್ ಪ್ರಕರಣದ ಬಂಧಿತ ಆರೋಪಿ ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಅವರ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರೀಸದಸ್ಯ ಪೀಠವು ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮೊಹರು ಕವರ್‌ನಲ್ಲಿ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಇಡಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚಿದಂಬರಂ ಅವರು ಬಂಧನದಲ್ಲಿ ಇದ್ದರೂ ನಿರ್ಣಾಯಕ ಸಾಕ್ಷಿಗಳ ಮೇಲೆ ಗಣನೀಯ ಪ್ರಭಾವವ ಬೀರುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ಪೀಠದ ಮುಂದೆ ಮನವರಿಕೆ ಮಾಡಿಕೊಂಡರು.
ಚಿದಂಬರಂ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರು, ಚಿದಂಬರಂ ಅವರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸುವ ಯಾವುದೇ ಪುರಾವೆಗಳಿಲ್ಲ. ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಅಥವಾ ಯಾವುದೇ ಪುರಾವೆಗಳನ್ನು ಹಾಳು ಮಾಡಿದ್ದಾರೆ ಎಂದು ತೋರಿಸಲು ಸಾಕ್ಷಿಗಳು ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಚಿದಂಬರಂ ಅವರ ಜಾಮೀನು ಅರ್ಜಿಯನ್ನು ಆರಂಭದಿಂದಲೂ ಇಡಿ ವಿರೋಧಿಸಿಕೊಂಡು ಬರುತ್ತಿದೆ. ಆರ್ಥಿಕ ಅಪರಾಧಗಳು ಗಂಭೀರವಾಗಿದೆ. ಏಕೆಂದರೆ ಅವು ರಾಷ್ಟ್ರದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಲ್ಲದೇ, ದೇಶದ ಜನರಲ್ಲಿನ ನಂಬಿಕೆಯನ್ನು ಅಲುಗಾಡಿಸುತ್ತದೆ ಎಂದು ಮೆಹ್ತಾ ಹೇಳಿದರು.