ಮಧುರೈ: ಅಶ್ಲೀಲ ಜಾಹೀರಾತುಗಳ ವಿರುದ್ಧ ಮಧ್ಯಂತರ ನಿಷೇಧ ಹೇರಲು ಮುಧುರೈ ಹೈಕೋರ್ಟ್ ಪೀಠ ಆದೇಶಿಸಿದೆ.
ವಿರುಧುನಗರ ಜಿಲ್ಲೆಯ ರಾಜಪಾಲಯಂನ ಸಕ್ಕ ದೇವರಾಜ ಎಂಬುವವರು ಮಧುರೈ ಹೈಕೋರ್ಟ್ ಪೀಠಕ್ಕೆ ಪಿಐಎಲ್ ಸಲ್ಲಿಸಿದ್ದರು. ಗರ್ಭನಿರೋಧಕ, ಲೈಂಗಿಕ ಸಮಸ್ಯೆಗಳಿಗೆ ಸಂಬಂಧಿಸಿದ ಔಷಧಿ ಸೇರಿದಂತೆ ಇತರೆ ಜಾಹೀರಾತು ಬಹಳ ಅಶ್ಲೀಲವಾಗಿವೆ. ಇವು ಹದಿಹರೆಯದವರನ್ನು ಪ್ರಚೋದಿಸುತ್ತಿವೆ ಎಂದು ಪಿಐಎಲ್ನಲ್ಲಿ ಉಲ್ಲೇಖಿಸಿದ್ದರು.
ಜಾಹೀರಾತು ಮತ್ತು ಟಿವಿ ಕಾರ್ಯಕ್ರಮಗಳಿಗೆ ಸೆನ್ಸಾರ್‌ಶಿಪ್ ಇಲ್ಲ ಎಂಬುದು ತಿಳಿದುಬಂದಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೇಳುತ್ತದೆ. ಇದರ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ. ಹದಿಹರೆಯದವರು ದುಷ್ಕರ್ಮಿಗಳಾಗುತ್ತಿದ್ದಾರೆ. ಆದ್ದರಿಂದ, ಜಾಹೀರಾತುಗಳನ್ನು ಸೆನ್ಸಾರ್ ಮಾಡಬೇಕು. ಕಾಯ್ದೆ ಉಲ್ಲಂಘಿಸುವ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರುಬಕರನ್ ಅವರು, ಗರ್ಭನಿರೋಧಕ, ಲೈಂಗಿಕ ಸಮಸ್ಯೆಯ ಔಷಧಗಳು, ಒಳ ಉಡುಪು, ಸಾಬೂನು, ಐಸ್ ಕ್ರೀಮ್ ಮತ್ತು ಸುಗಂಧ ದ್ರವ್ಯಗಳು ಸೇರಿದಂತೆ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಡೆಲು ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ, ತಮಿಳುನಾಡು ಸುದ್ದಿ, ಚಲನಚಿತ್ರ ತಂತ್ರಜ್ಞಾನ ಮತ್ತು ಚಲನಚಿತ್ರ ಕಾನೂನು ಕಾರ್ಯದರ್ಶಿಗೆ ಪ್ರತಿಕ್ರಿಯಿಸಲು ಆದೇಶಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು 2 ವಾರಗಳವರೆಗೆ ಮುಂದೂಡಲಾಯಿತು.
ಪ್ರತಿಕೂಲ ಪರಿಣಾಮದ ಕಂಟೆಂಟ್ ಪ್ರದರ್ಶಿಸುವ ನ್ಯೂಸ್ ಪೋರ್ಟಲ್, ಸಾಮಾಜಿಕ ಜಾಲತಾಣ, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಪ್ಲ್ಸ್, ಹಾಟ್ಸ್ಟಾರ್ನಂತಹ ಒಟಿಟಿ ಪ್ಟಾಟ್ಫಾರಂಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈ ಮೂಲಕ ಅವುಗಳ ಮೇಲೆ ಹಿಡಿತ ಸಾಧಿಸಿದೆ. ಇದರ ಬೆನ್ನಲ್ಲೇ ಅಶ್ಲೀಲ ಜಾಹೀರಾತುಗಳ ನಿಷೇಧಕ್ಕೆ ಮಧುರೈ ಹೈಕೋರ್ಟ್ ಪೀಠ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.