ಹೊಸದಿಲ್ಲಿ: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ಗಳಿಂದಾಗಿ ಭಾರತದ ಕೈಗಾರಿಕಾ ಉತ್ಪಾದನೆ ಭಾರಿ ಕುಸಿತ ಕಂಡಿದೆ. ಕೊರೊನಾ ವೈರಸ್ನಿಂದಾಗಿ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಕುಂಠಿತಗೊಂಡಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಕೈಗಾರಿಕೆ ಉತ್ಪನ್ನದ ಸೂಚ್ಯಂಕ ಪಿಎಂಐ ಸೂಚ್ಯಂಕ ಮಾರ್ಚ್ನಲ್ಲಿ 51.8 ರಷ್ಟಿದೆ. ಇದು ಫೆಬ್ರವರಿಯಲ್ಲಿ 54.5 ರಷ್ಟಿತ್ತು. 2019ರ ನವೆಂಬರ್ ನಂತರದ ಅತಿ ನಿಧಾನಗತಿಯ ಉತ್ಪಾದನಾ ವಲಯದ ಬೆಳವಣಿಗೆ ಇದಾಗಿದೆ. ಮುಂದಿನ 12 ತಿಂಗಳ ಆರ್ಥಿಕ ಪ್ರಗತಿಯ ನಿರೀಕ್ಷೆಗಳು ನಿರಾಶಾದಾಯಕವಾಗಿವೆ. ಈಗ ವಿಧಿಸಲಾಗಿರುವ ಲಾಕ್ಡೌನ್ ದೀರ್ಘಾವಧಿಯವರೆಗೆ ಮುಂದುವರೆಯಬಹುದೆಂಬ ಭೀತಿಯೂ ಹಿಂಜರಿತಕ್ಕೆ ಕಾರಣವಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಭಾರತೀಯ ಉತ್ಪಾದಕರಿಗೆ ಬರುತ್ತಿರುವ ಹೊಸ ಆರ್ಡರ್ಗಳ ಪ್ರಮಾಣ ಅತಿ ಕಡಿಮೆಯಾಗಿದ್ದು, ಅದೇ ಸಮಯಕ್ಕೆ ಹೊಸ ರಫ್ತು ಚಟುವಟಿಕೆಗಳು ಸಹ ಪಾತಾಳಕ್ಕೆ ಕುಸಿದಿವೆ. ಕೊರೊನಾ ವೈರಸ್ ಕಾರಣದಿಂದ ಅತಿ ವೇಗವಾಗಿ ಭಾರತದ ಉತ್ಪಾದನಾ ವಲಯ ನೆಲ ಕಚ್ಚುತ್ತಿದೆ ಎಂದು ಹೇಳಲಾಗಿದೆ.