ವಾಷಿಂಗ್ಟನ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸಿರುವ ಭಾರತೀಯ ಆರ್ಥಿಕತೆಯು ಈ ವರ್ಷ ಶೇ 10.3ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿಸಿದೆ.
ಆದಾಗ್ಯೂ ಭಾರತವು 2021ರಲ್ಲಿ ಶೇ 8.8ರಷ್ಟು ಬೆಳವಣಿಗೆಯ ದರ ಮುಟ್ಟುವ ಸಾಧ್ಯತೆಯಿದೆ. ಇದರಿಂದಾಗಿ ವೇಗವಾಗಿ ಬೆಳೆಯುತ್ತಿರುವ ತನ್ನ ಉದಯೋನ್ಮುಖ ಆರ್ಥಿಕತೆಯ ಸ್ಥಾನ ಮರಳಿ ಪಡೆಯುತ್ತದೆ. ಇದೇ ವೇಳೆ, ಚೀನಾದ ನಿರೀಕ್ಷಿತ ಬೆಳವಣಿಗೆಯ ದರ ಶೇ 8.2ರಷ್ಟಿದೆ ಎಂದು ಐಎಂಎಫ್ ತನ್ನ ಇತ್ತೀಚಿನ 'ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ ತಿಳಿಸಿದೆ.
ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಿಗೆ ಮುನ್ನ ಬಿಡುಗಡೆಯಾದ ವರದಿಯಲ್ಲಿ ಜಾಗತಿಕ ಬೆಳವಣಿಗೆ ಈ ವರ್ಷ ಶೇ 4.4ರಷ್ಟು ಕುಗ್ಗುತ್ತದೆ. 2021ರಲ್ಲಿ ಶೇ 5.2ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದೆ.
ಅಮೆರಿಕದ ಆರ್ಥಿಕತೆಯು 2020ರಲ್ಲಿ ಶೇ 5.8ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ. ಮುಂದಿನ ವರ್ಷ ಶೇ 3.9ರಷ್ಟು ಏರಿಕೆಯಾಗಲಿದೆ. 2020ರಲ್ಲಿ ಧನಾತ್ಮಕ ಬೆಳವಣಿಗೆಯ ದರ ಶೇ 1.9ರಷ್ಟು ತೋರಿಸಿದ ಪ್ರಮುಖ ಆರ್ಥಿಕತೆಗಳಲ್ಲಿ ಚೀನಾ ಮಾತ್ರವಿದೆ ಎಂದು ಹೇಳಿದೆ.
ಐಎಂಎಫ್ ವರದಿಯಲ್ಲಿ ಭಾರತದತ್ತ ವಿಶೇಷವಾಗಿ ಆಸಕ್ತಿ ತಳೆದಿದೆ. ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚು ತೀವ್ರವಾಗಿ ಸಂಕುಚಿತಗೊಂಡಿದೆ. ಈ ಪರಿಣಾಮವಾಗಿ 2020ರಲ್ಲಿ ಆರ್ಥಿಕತೆಯು ಶೇ 10.3ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ. 2021ರಲ್ಲಿ ಶೇ 8.8ರಷ್ಟು ಮರುಕಳಿಸುವ ಸಾಧ್ಯತೆ ಇದೆ. 2019ರಲ್ಲಿ ಭಾರತದ ಬೆಳವಣಿಗೆಯ ದರವು ಶೇ 4.2ರಷ್ಟಿತ್ತು ಎಂದು ವಿವರಿಸಿದೆ.
ಐಎಂಎಫ್ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯಿಂದ ಹೆಚ್ಚು ಹಾನಿ ಕಂಡ ರಾಷ್ಟ್ರಗಳ ಪೈಕಿ ಭಾರತವೂ ಇದೆ. ಆರಂಭದಲ್ಲಿ ಹೆಚ್ಚಿನ ತಾಪಮಾನ ತೋರಿಸುತ್ತದೆ. ಭಾರತಕ್ಕೆ ಹವಾಮಾನ ಬದಲಾವಣೆಯ ತಗ್ಗಿಸುವಿಕೆಯ ನಿಷ್ಕ್ರಿಯತೆಗೆ ಹೋಲಿಸಿದರೆ 2100ರ ವೇಳೆಗೆ ಜಿಡಿಪಿಯ ಶೇ 60-80ರಷ್ಟಾಗುತ್ತದೆ ಎಂದು ಎಚ್ಚರಿಸಿದೆ.