ನವದೆಹಲಿ: ಮುಂದಿನ ನಾಲ್ಕೈದು ವರ್ಷಗಳಲ್ಲಿ ಭಾರತದಿಂದ ರಕ್ಷಣಾ ಸರಕುಗಳ ರಫ್ತು ವಹಿವಾಟು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಧ್ಯಕ್ಷ ಜಿ. ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಮುಂದಿನ 4-5 ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಯು ಸ್ಥಳೀಯವಾಗಿ ತಯಾರಿಸಿದ ಸಾಕಷ್ಟು ಉತ್ಪನ್ನಗಳನ್ನು ಹೊಂದಿರಲಿದೆ. ರಫ್ತು ಪ್ರಮಾಣದಲ್ಲಿ ನಾವು ಅಪಾರ ಪ್ರಮಾಣದ ಹೆಚ್ಚಳ ಕಾಣಲಿದ್ದೇವೆ ಎಂದು ಕೈಗಾರಿಕಾ ಸಂಸ್ಥೆ ಸಿಐಐ ಆಯೋಜಿಸಿದ ವೆಬಿನಾರ್‌ನಲ್ಲಿ ಹೇಳಿದರು.
ನಮ್ಮ ಪ್ರತಿಯೊಂದು ಯೋಜನೆಯಲ್ಲಿ ಉದ್ಯಮದಿಂದ ಅಭಿವೃದ್ಧಿ ಮತ್ತು ಉತ್ಪಾದನಾ ಪಾಲುದಾರರನ್ನು ಆಹ್ವಾನಿಸಿದ್ದೇವೆ. ಕ್ಷಿಪಣಿಗಳಂತಹ ನಿರ್ಣಾಯಕ ವ್ಯವಸ್ಥೆಗಳನ್ನು ಸಹ ಖಾಸಗಿ ಉದ್ಯಮಕ್ಕೆ ಬಾಗಿಲು ತೆರೆಯಲಾಗಿದೆ. ಇತ್ತೀಚೆಗೆ ಆಕಾಶ್ ಕ್ಷಿಪಣಿಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲು ಸರ್ಕಾರ ಅನುಮೋದನೆ ನೀಡಿದೆ ಎಂದರು.
2020ರ ಡಿಸೆಂಬರ್ 30ರಂದು ಸರ್ಕಾರವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ್ ಕ್ಷಿಪಣಿ ರಫ್ತು ಮಾಡಲು ಅನುಮೋದಿಸಿತ್ತು. ವಿವಿಧ ದೇಶಗಳ ಸ್ವಾಧೀನ ಪ್ರಸ್ತಾಪಗಳಿಗೆ ವೇಗವಾಗಿ ಅನುಮೋದನೆ ನೀಡುವಂತೆ ಸೂಚಿಸಿದೆ.
ಇದನ್ನೂ ಓದಿ: ಯೆಸ್ ಬ್ಯಾಂಕ್ ಉಪಾಧ್ಯಕ್ಷ ಧೀರಜ್ ಕಿಡ್ನಾಪ್, ಹತ್ಯೆ ಪ್ರಕರಣ: 5 ತಿಂಗಳ ಬಳಿಕ ಕೇಸ್ ಸಿಬಿಐಗೆ ಹಸ್ತಾಂತರ
ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಅತ್ಯಾಧುನಿಕ ಸಿಸ್ಟಮ್ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ದೇಶದೊಳಗೆ ಮಾಡಿದಾಗ ಒಂದು ದೇಶವು ನಿಜವಾದ ಆತ್ಮನಿರ್ಭರವನ್ನು (ಸ್ವಾವಲಂಬಿ) ಸಾಧಿಸುತ್ತದೆ ಎಂದು ರೆಡ್ಡಿ ಹೇಳಿದರು.
ಜಾಗತಿಕವಾಗಿ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತ ಕೂಡ ಒಂದು ಪ್ರಮುಖ ರಾಷ್ಟ್ರವಾಗಿದೆ. ಒಂದು ಅಂದಾಜಿನ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸುಮಾರು 130 ಶತಕೋಟಿ ಡಾಲರ್ ಬಂಡವಾಳವನ್ನು ಶಸ್ತ್ರಾಸ್ತ್ರ ಸಂಗ್ರಹಕ್ಕಾಗಿ ಖರ್ಚು ಮಾಡುವ ನಿರೀಕ್ಷೆಯಿದೆ.
ಸರ್ಕಾರವು ಈಗ ಆಮದು ಮಾಡಿಕೊಂಡ ಮಿಲಿಟರಿ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಬಯಸಿದೆ. ದೇಶೀಯ ರಕ್ಷಣಾ ಉತ್ಪಾದನೆ ಬೆಂಬಲಿಸಲು ನಿರ್ಧರಿಸಿದೆ.
ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ 25 ಬಿಲಿಯನ್ ಡಾಲರ್ (1.75 ಲಕ್ಷ ಕೋಟಿ ರೂ.) ವಹಿವಾಟು ನಡೆಸುವ ಗುರಿಯನ್ನು ರಕ್ಷಣಾ ಸಚಿವಾಲಯ ಈಗಾಗಲೇ ನಿಗದಿಪಡಿಸಿದೆ. ಇದರಲ್ಲಿ 5 ಬಿಲಿಯನ್ ಡಾಲರ್ (35,000 ಕೋಟಿ ರೂ.) ಮೌಲ್ಯದ ಮಿಲಿಟರಿ ಯಂತ್ರಾಂಶ ರಫ್ತು ಗುರಿ ಇರಿಸಿಕೊಂಡಿದೆ.