ನವದೆಹಲಿ: 2020ನೇ ಸಾಲಿನಲ್ಲಿ ಭಾರತೀಯ ನೌಕರರ ವೇತನವು ಶೇ 10ರಷ್ಟು ಏರಿಕೆ ಆಗಲಿದೆ ಎಂದು ಕ್ಯೂ 3 ಸಂಬಳ ಬಜೆಟ್ ಯೋಜನಾ ಸಮೀಕ್ಷೆ ಭವಿಷ್ಯ ನುಡಿದಿದೆ.
ಭಾರತದಲ್ಲಿ ವೇತನವು 2020ರಲ್ಲಿ ಶೇ 10ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಇದು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಚೀನಾ, ಹಾಂಕಾಂಗ್ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಲ್ಲಿ ಕಡಿಮೆ ಏರಿಕೆ ಆಗಲಿದೆ ಎಂದಿದೆ. 2019ರಲ್ಲಿನ ವೇತನ ಹೆಚ್ಚಳದ ಶೇ 9.9ರಷ್ಟಕ್ಕಿಂತ ಸ್ವಲ್ಪ ಹೆಚ್ಚಾಗಿರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ವೇತನ ಹೆಚ್ಚಳವು 2015 ರಿಂದ ಸುಮಾರು ಶೇ 10ರಷ್ಟ ಸ್ಥಿರಗೊಳಿಸಿದ್ದ ಕ್ಯೂ 3, 2019ರಲ್ಲಿ ಮಾತ್ರ ಅಲ್ಪ ಕ್ಷೀಣಿಸಿದೆ. ಏಷ್ಯಾ ಪೆಸಿಫಿಕ್ನ ಇತರ ಪ್ರದೇಶಗಳಲ್ಲಿ ಇಂಡೋನೇಷ್ಯಾ ಶೇ 8ರಷ್ಟು, ಚೀನಾ ಶೇ 6.5ರಷ್ಟು, ಫಿಲಿಪಿನ್ಸ್ ಶೇ 6ರಷ್ಟು ಮತ್ತು ಹಾಂಕಾಂಗ್ ಮತ್ತು ಸಿಂಗಾಪುರದಲ್ಲಿ ಶೇ 4ರಷ್ಟು ಇರಲಿದೆ ಎಂದು ಅಂದಾಜಿಸಿದೆ.
ಭಾರತದಲ್ಲಿ ವೇತನ ಹೆಚ್ಚಳದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಮುಂದುವರಿದಿದ್ದರೂ ಕಂಪನಿಗಳು ಕೆಲವು ಎಚ್ಚರಿಕೆಯ ನಡೆಯನ್ನು ಅನುಸರಿಸಲಿವೆ. ಹಿಂದಿನ ವರ್ಷಗಳಂತೆ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡುವ ಉದ್ದೇಶವನ್ನು ಅವುಗಳು ಹೊಂದಿಲ್ಲ. ಆಟೋಮೊಬೈಲ್, ಆಟೋಮೊಬೈಲ್ ಪೂರಕ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ನೇಮಕ ಚಟುವಟಿಕೆ ಮಂದಗತಿಯಲ್ಲಿ ಸಾಗಲಿದೆ. ಹೈಟೆಕ್ ಕ್ಷೇತ್ರಗಳು, ಸೇವಾ ಹೊರಗುತ್ತಿಗೆ, ಔಷಧ, ಇಂಧನ, ಚಿಲ್ಲರೆ ಮತ್ತು ರಾಸಾಯನಿಕಗಳಲ್ಲಿ ನೇಮಕ ಸ್ಥಿರವಾಗಿರಲಿದೆ ಎಂದು ವರದಿ ಹೇಳಿದೆ.
ವರದಿಯ ಅನ್ವಯ, ಸಾಮಾನ್ಯ ಉದ್ಯಮ, ರಾಸಾಯನಿಕ, ಹೈಟೆಕ್ ಮತ್ತು ಔಷಧ ಉದ್ಯಮದಲ್ಲಿ ಶೇ 10ರಷ್ಟು ವೇತನ ಹೆಚ್ಚಾಗಲಿದೆ. 2019ರಲ್ಲಿ ಶೇ 8.5ರಷ್ಟಿದ್ದ ಇಂಧನ ಕ್ಷೇತ್ರವು 2020ರಲ್ಲಿ ಶೇ 9.3ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಹಣಕಾಸು ಸೇವಾ ವಲಯದಲ್ಲಿ ಶೇ 9.7ರಷ್ಟು, ಗ್ರಾಹಕ ಉತ್ಪನ್ನಗಳ ಕ್ಷೇತ್ರದಲ್ಲಿ ಶೇ 9.9ರಷ್ಟು ಎಂದು ಅಂದಾಜಿಸಲಾಗಿದೆ.