ನವದೆಹಲಿ: ಜಗತಿನಲ್ಲೇ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಭಾರತ ಸೇನಾ ಸಾಮರ್ಥ್ಯದಲ್ಲೂ ಗಣನೀಯ ಪ್ರಗತಿ ಸಾಧಿಸಿದೆ. ವಿಶ್ವದಲ್ಲೇ 5ನೇ ಬಲಾಢ್ಯ ಸೈನ್ಯ ಹೊಂದಿದ ಹೆಗ್ಗಳಿಕೆ ಭಾರತದ್ದು. ಹಾಗಿದ್ದರೇ ಪಾಕ್ ಸೈನ್ಯ ಭಾರತೀಯ ಸೈನಿಕರ ಪ್ರತಿದಾಳಿ ಎದುರುಸಿವಷ್ಟು ಶಕ್ತವಾಗಿದೆಯಾ?
ವಾರ್ಷಿಕ ₹ 3.36 ಲಕ್ಷ ಕೋಟಿ ರಕ್ಷಣಾ ಬಜೆಟ್ ಹೊಂದಿರುವ ಭಾರತ 13 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಹೊಂದಿದೆ. ದಶಕಗಳಿಂದ ಸದಾ ಕಾಲುಕೆದರಿ ಜಗಳಕ್ಕೆ ಬರುತ್ತಿರುವ ಪಾಕ್ ಮತ್ತು ಚೀನಾವನ್ನು ಎದುರಿಸಲು ಒಟ್ಟು ಬಂಡವಾಳ ವೆಚ್ಚದಲ್ಲಿ ಶೇ 32.19ರಷ್ಟು ಹಣವನ್ನು ಮಿಲಿಟರಿಗೆ ವಿನಿಯೋಗಿಸುತ್ತಿದೆ. ಈ ವರ್ಷ ಶೇ 6.87ರಷ್ಟು ಹಣವನ್ನು ಹೆಚ್ಚುವರಿಯಾಗಿ ಏರಿಸಲಾಗಿದೆ.
ಭಾರತದ ಶತ್ರು ಪಾಕ್‌ನ ವಾರ್ಷಿಕ ರಕ್ಷಣಾ ಬಜೆಟ್ ಕೇವಲ ₹ 45,500 ಕೋಟಿ. ಇದು ವಿವಾದಿತ ರಫೇಲ್ ಡೀಲ್ನ ₹ 59 ಸಾವಿರ ಕೋಟಿ ದಾಟುವುದಿಲ್ಲ. ಪಾಕ್ ಬಳಿ 6 ಲಕ್ಷ ಸಕ್ರಿಯ ಸೇನಾ ಸಿಬಂದಿ ಇದ್ದು, ಆ ದೇಶದ ಬಳಿ 914 ಯುದ್ಧ ವಿಮಾನಗಳಿವೆ. 2017ರಲ್ಲಿ ಒಟ್ಟು ಬಂಡವಾಳ ವೆಚ್ಚದಲ್ಲಿ ಶೇ 16.7ರಷ್ಟು ಮಾತ್ರವೇ ಖರ್ಚು ಮಾಡಿದೆ. ಸೈನಿಕ ಸಾಮರ್ಥ್ಯದಲ್ಲಿ ವಿಶ್ವದ 11ನೇ ಸ್ಥಾನದಲ್ಲಿರುವ ಪಾಕ್, 'ಯುದ್ಧ ಭೂಮಿಯಲ್ಲಿ ಭಾರತವನ್ನು ನೋಡಿಕೊಳ್ಳುತ್ತೇವೆ' ಎಂಬ ಹೇಳಿಕೆಯನ್ನು ಅಲ್ಲಿನ ಪ್ರಧಾನಿ, ಸೇನಾ ಮುಖ್ಯಸ್ಥರು ನೀಡುತ್ತಿದ್ದಾರೆ. ತನ್ನದೇ ಭೂಪ್ರದೇಶ ನಾಶವಾದರೂ ಚಿಂತೆಯಿಲ್ಲ ಭಾರತದ ಮೇಲೆ ಪ್ರತಿದಾಳಿ ಮಾಡುತ್ತೇವೆ ಎನ್ನುವಂತಿದೆ ಈ ನಡೆ.
ವಿಧ್ವಂಸಕ ಕ್ಷಿಪಣಿ ಸಾಮರ್ಥ್ಯ
ಉಭಯ ರಾಷ್ಟ್ರಗಳು ಎರಡೂ ದೇಶಗಳನ್ನು ತಲುಪಬಲ್ಲ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಭಾರತೀಯ ಪಡೆಯಲ್ಲಿ ಆಗಸವನ್ನೇ ಸೀಳಿಕೊಂಡು, ಭೂಮಿಯನ್ನೇ ತುಂಡು ಮಾಡುವಂತಹ ಮಿಸೈಲ್ಗಳಿವೆ. ಭಾರತದ ಬತ್ತಳಿಕೆಯಲ್ಲಿ ಸದ್ಯ ಅಗ್ನಿ ಸರಣಿಯ 4 ಕ್ಷಿಪಣಿಗಳಿವೆ. ಅಗ್ನಿ-1: 700 ಕಿ.ಮೀ., ಅಗ್ನಿ-2: 2,000 ಕಿ.ಮೀ., ಅಗ್ನಿ-3: 2500 ಕಿ.ಮೀ. ಮತ್ತು ಅಗ್ನಿ-4: 3500 ಕಿ.ಮೀ ವ್ಯಾಪ್ತಿಗೆ ತಲುಪುವ ಸಾಮರ್ಥ್ಯ ಹೊಂದಿದೆ. ಅಗ್ನಿ-5 ಕ್ಷಿಪಣಿ ನಿಖರವಾಗಿ ತನ್ನ ಗುರಿ ತಲುಪುವ ಪ್ರಯೋಗ ಯಶಸ್ವಿಯಾಗಿದೆ. ಹೀಗಾಗಿ, ಅಗ್ನಿ-5 ಕ್ಷಿಪಣಿ ಭಾರತ ಸೇನೆಯ ಬತ್ತಳಿಕೆ ಸೇರುವ ಹಂತದಲ್ಲಿದ್ದು, ಇದು ಸೇರ್ಪಡೆಗೊಂಡರೇ ಪಾಕ್‌ನ ಒಂದು ನಗರವನ್ನೇ ಬೂದಿ ಮಾಡಬಲ್ಲದು. ಚೀನಾದ ಸಹಾಯದಿಂದ ನಿರ್ಮಿಸಲಾದ ಪಾಕಿಸ್ತಾನದ ಕ್ಷಿಪಣಿಗಳು ಭಾರತದ ಯಾವುದೇ ಭಾಗವನ್ನು ತಲುಪುವ ಸಣ್ಣ ಮತ್ತು ಮಧ್ಯಮ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಮಾತ್ರ ಒಳಗೊಂಡಿವೆ.
ಭಾರತ 12 ಲಕ್ಷ ಬಲಿಷ್ಠ ಸೈನ್ಯವನ್ನು ಹೊಂದಿದೆ. 3,565ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್, 3,100 ಪದಾತಿ ಹೋರಾಟದ ವಾಹನಗಳು, 336 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಮತ್ತು 9,719 ಫಿರಂಗಿಗಳನ್ನು ಒಳಗೊಂಡಿದೆ. ಪಾಕಿಸ್ತಾನದ ಸೈನ್ಯವು ಚಿಕ್ಕದಾಗಿದ್ದು 2,496 ಟ್ಯಾಂಕರ್ಗಳು, 1,605 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಮತ್ತು 375 ಸ್ವಯಂಚಾಲಿತ ಹೊವಿಟ್ಜರ್ ಫಿರಂಗಿ, 4,472 ಆರ್ಟಿಲರಿ ಬಂದೂಕು ಪಡೆ ಸೇರಿದಂತೆ 6 ಲಕ್ಷ ಸೈನಿಕರಿದ್ದಾರೆ.
ಮಿಂಚಿನ ದಾಳಿಯ ವಾಯುಪಡೆ
ಭಾರತದ ವಾಯುಪಡೆಯಲ್ಲಿ 1.27 ಲಕ್ಷ ಸೈನಿಕರಿದ್ದು, 814 ಫೈಟರ್ ವಿಮಾನಗಳಿವೆ. ಫೈಟರ್ಗಳ ಸಂಖ್ಯೆ ಹೆಚ್ಚಾಗಿದ್ದರೂ ಜೆಟ್ ಫೈಟರ್ ಕುರಿತು ಒಂದಿಷ್ಟು ಆತಂಕವಿದೆ. ಚೀನಾ ಮತ್ತು ಪಾಕ್ ಅನ್ನು ಸಮರ್ಥವಾಗಿ ಬಡಿಯಲು ಭಾರತಕ್ಕೆ 42 ಸ್ಕ್ವಾಡ್ರನ್ ಸೇರಿ 750 ಯುದ್ಧ ವಿಮಾನಗಳಿವೆ. ರಫೇಲ್ ಯುದ್ಧವಿಮಾನಗಳು ಸೇನೆಗೆ ಭರ್ತಿಗೊಂಡಿದ್ದರಿಂದ ವಾಯುಪಡೆ ಬಲ ಹೆಚ್ಚಿಸಿದೆ.
ಅತ್ತ ಚೀನಾ ಮೂಲದ ಎಫ್- 7 ಜಿಪಿ ಮತ್ತು ಅಮೆರಿಕದ ಎಫ್-16 ಫೈಟಿಂಗ್ ಫಾಲ್ಕನ್ ಜೆಟ್ ಸೇರಿದಂತೆ 425 ಯುದ್ಧ ವಿಮಾನಗಳನ್ನು ಮಾತ್ರ ಪಾಕಿಸ್ತಾನ ಹೊಂದಿದೆ.
ನೌಕಾಪಡೆಯ ಶಕ್ತಿ
ಭಾರತದ ನೌಕಾಪಡೆಯು ಒಂದು ವಿಮಾನವಾಹಕ ನೌಕೆ, 16 ಜಲಾಂತರ್ಗಾಮಿಗಳು, 14 ವಿಧ್ವಂಸಕ ಅಸ್ತ್ರಗಳು, 13 ಯುದ್ಧನೌಕೆಗಳು, 106 ಗಸ್ತು ಹಡಗುಗಳು, ಹಲವು ಕರಾವಳಿ ಫೈಟರ್ ನೌಕೆಗಳು ಹಾಗೂ 75 ಯುದ್ಧ ವಿಮಾಗಳನ್ನು ಸಾಗಿಸುವ ಜಲಾಂತರ್ಗಾಮಿ ನೌಕೆ ಸೇರಿದಂತೆ 67,700 ಸಿಬ್ಬಂದಿ ಇದ್ದಾರೆ.
ಚಿಕ್ಕ ಜಲಮಾರ್ಗ ಹೊಂದಿರುವ ಪಾಕಿಸ್ತಾನ 9 ಫ್ರಿಗೇಟ್, 8 ಜಲಾಂತರ್ಗಾಮಿ, 17 ಗಸ್ತು ಮತ್ತು ಕರಾವಳಿ ಹಡಗುಗಳು ಹಾಗೂ 8 ಫೈಟರ್ ವಿಮಾನಗಳನ್ನು ಹೊಂದಿದೆ.