ನವದೆಹಲಿ: ಭಾರತ, ಚೀನಾ ಮಾತ್ರವಲ್ಲದೇ ಜಾಗತಿಕಮಟ್ಟದಲ್ಲಿ ಆರ್ಥಿಕ ಹಿಂಜರಿತ ಬಲವಾಗಿ ತಟ್ಟಿದ್ದು, ಇದರ ಪರಿಣಾಮ ಸಾವಿರಾರು ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ಭಾರತದಲ್ಲಿ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಮಾಡುತ್ತಿರುವ ವೇಳೆಯಲ್ಲೇ ವಿಶ್ವದ ಏಳನೇ ಅತಿದೊಡ್ಡ ಬ್ಯಾಂಕ್ ಹೆಚ್ಎಸ್ಬಿಸಿ ಸುಮಾರು ಹತ್ತು ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕಲು ಚಿಂತಿಸಿದೆ ಎಂದು ವಿದೇಶಿ ಪತ್ರಿಕೆಯೊಂದು ವರದಿ ಮಾಡಿದೆ.
ಉನ್ನತ ಹುದ್ದೆಗಳಲ್ಲಿರುವ ಹೆಚ್ಚಿನ ಸಂಬಳ ತೆಗೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಹೆಚ್ಎಸ್ಬಿಸಿ ಗೇಟ್ಪಾಸ್ ನೀಡಲಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.
ಇದೇ ತಿಂಗಳಾಂತ್ಯಕ್ಕೆ ಹೆಚ್ಎಸ್ಬಿಸಿ ಉದ್ಯೋಗ ಕಡಿತವನ್ನು ಅಂತಿಮ ಮಾಡಲಿದೆ. ಆಗಸ್ಟ್ ತಿಂಗಳಲ್ಲಿ ಕ್ವಿನ್ ಎಂಬುವವರನ್ನು ಮಧ್ಯಂತರ ಸಿಇಒ ಆಗಿ ನೇಮಕ ಮಾಡಿ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಕ್ವಿನ್ ಆಯ್ಕೆಯ ಅಚ್ಚರಿ ಮಧ್ಯೆಯೇ ಉದ್ಯೋಗ ಕಡಿತ ಕುತೂಹಲಕ್ಕೆ ಕಾರಣವಾಗಿದೆ.
ಜಾಗತಿಕ ಅರ್ಥವ್ಯವಸ್ಥೆಯ ಅಸಮತೋಲನ, ವಾಣಿಜ್ಯ ಸಮರ ಹಾಗೂ ಕುಸಿಯುತ್ತಿರುವ ಬಡ್ಡಿದರಗಳ ಹಿನ್ನೆಲೆಯಲ್ಲಿ ವ್ಯವಹಾರವನ್ನು ಸರಿದೂಗಿಸಲು ಹೆಚ್ಎಸ್ಬಿಸಿ ಭಾರಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.