ನವದೆಹಲಿ: ಲಾಕ್‌ಡೌನ್ ದೃಷ್ಟಿಯಿಂದ ಕೇಂದ್ರ ಸರ್ಕಾರ ಚಿಲ್ಲರೆ ಹಣದುಬ್ಬರ ದತ್ತಾಂಶದ ಒಂದು ಭಾಗ ಮಾತ್ರ ಬಿಡುಗಡೆ ಮಾಡಿದ್ದು, ಮೇ ತಿಂಗಳಲ್ಲಿ ಆಹಾರದ ಬೆಲೆಗಳ ಹಣದುಬ್ಬರ ಶೇ 9.28ರಷ್ಟು ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
ಗ್ರಾಮೀಣ, ನಗರ ಮತ್ತು ಸಂಯೋಜಿತ ವಲಯದಲ್ಲಿ 2020ರ ಮೇ ತಿಂಗಳ ಅವಧಿಯಲ್ಲಿ ಗ್ರಾಹಕ ಆಹಾರ ಬೆಲೆ ಸೂಚ್ಯಂಕ (ಸಿಎಫ್‌ಪಿಐ) ಆಧಾರಿತ ಹಣದುಬ್ಬರ ದರಗಳು ವರ್ಷದಿಂದ ವರ್ಷಕ್ಕೆ ಕ್ರಮವಾಗಿ ಶೇ 9.69, ಶೇ 8.36 ಮತ್ತು 9.28ರಷ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
2019ರ ಮೇ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಆಗಿದ್ದ ಸಿಪಿಐನ ಆಹಾರ ಹಣದುಬ್ಬರವು ಶೇ 1.83 ರಷ್ಟಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿಲ್ಲರೆ ಹಣದುಬ್ಬರದ ಮೊಟಕುಗೊಳಿಸಿದ ಡೇಟಾವನ್ನು ಸತತ ಎರಡನೇ ತಿಂಗಳು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಏಪ್ರಿಲ್ ತಿಂಗಳಲ್ಲಿ ಸಹ ಕೇಂದ್ರೀಯ ಸಾಂಖ್ಯಿಕ ಕಚೇರಿ ಮತ್ತು ಅನುಷ್ಠಾನ ಸಚಿವಾಲಯವು ಮೊಟಕುಗೊಳಿಸಿದ ಸಿಪಿಐ ಡೇಟಾ ಬಿಡುಗಡೆ ಮಾಡಿತ್ತು.
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರವು 2020ರ ಮಾರ್ಚ್ 25ರಿಂದ ಲಾಕ್‌ಡೌನ್ ವಿಧಿಸಿತ್ತು. ದಿಗ್ಬಂಧನವು ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
2020ರ ಮೇ ತಿಂಗಳಲ್ಲಿ ಮಾರುಕಟ್ಟೆಯನ್ನು ಹಂತ-ಹಂತವಾಗಿ ಸೀಮಿತ ವಹಿವಾಟಿನ ಮೂಲಕ ಪುನರರಾಂಭಿಸಲಾಯಿತು. ಸಬ್ ಗ್ರೂಪ್/ ಗ್ರೂಪ್ಗಳ ಬೆಲೆ ಚಲನೆಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಪ್ರಕಟಣೆಯಲ್ಲಿ ತಿಳಿಸಿದೆ.