ನವದೆಹಲಿ: ಕೇಂದ್ರ ವಿತ್ತ ಸಚಿವಾಲಯ 2018-19ನೇ ಸಾಲಿಗೆ ಭವಿಷ್ಯ ನಿಧಿ (ಪಿಎಫ್) ಬಡ್ಡಿ ದರವನ್ನು ಶೇ. 0.10ರಷ್ಟು ಏರಿಕೆ ಮಾಡಿದೆ.
ಪರಿಷ್ಕೃತ ಬಡ್ಡಿ ದರ ಏರಿಕೆಯಿಂದ ಸಂಘಟಿತ ವಲಯದ 6 ಕೋಟಿಗೂ ಅಧಿಕ ಉದ್ಯೋಗಿಗಳಿಗೆ ಇದರ ಲಾಭ ದೊರೆಯಲಿದೆ. ಕಳೆದ 2017-18ರ ಹಣಕಾಸು ವರ್ಷದಲ್ಲಿ ಶೇ. 8.55 ಬಡ್ಡಿ ದರ ನಿಗದಿ ಮಾಡಲಾಗಿತ್ತು.
ಬಡ್ಡಿ ದರ ಏರಿಸಬೇಕು ಎನ್ನುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಪ್ರಸ್ತಾವನೆಗೆ ವಿತ್ತ ಸಚಿವಾಲಯ ಅನುಮೋದನೆ ನೀಡಿದೆ. 2017-18ರ ಹಣಕಾಸು ವರ್ಷದಲ್ಲಿ ನೀಡಲಾಗುತ್ತಿದ್ದ ಇಪಿಎಫ್ ಬಡ್ಡಿ ದರವನ್ನು ಈಗ ಶೇ 8.65ಕ್ಕೆ ಹೆಚ್ಚಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ಏರಿಕೆಯಾಗಿದೆ. ನೂತನ ಬಡ್ಡಿ ದರವನ್ನು ಒದಗಿಸಲು ಇಪಿಎಫ್ಒ ₹ 151 ಕೋಟಿ ಹೆಚ್ಚುವರಿ ಮೊತ್ತ ತೆಗೆದಿರಿಸಬೇಕಿದೆ. ಪಿಎಫ್‌ಒ ಪ್ರಸ್ತಾವನೆಗೆ ಹಣಕಾಸು ಸಚಿವಾಲಯವು ಅನುಮೋದನೆ ನೀಡಿದ್ದು, ಬಡ್ಡಿ ದರ ಹೆಚ್ಚಿಸುವ ಕುರಿತಂತೆ ಇಪಿಎಫ್ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಕಳೆದ ಫೆಬ್ರವರಿಯಲ್ಲಿ ನಿರ್ಧರಿಸಿತ್ತು.