ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಪರಾಮರ್ಶಾ ಸಮಿತಿಯು ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿ ಬಡ್ಡಿ ದರವನ್ನು ಶೇ 5.40ರಿಂದ ಶೇ 5.15ಕ್ಕೆ ಇಳಿಸಿದ ಬೆನ್ನಲ್ಲೇ ಆರ್ಥಿಕಾಭಿವೃದ್ದಿ ನಿರೀಕ್ಷೆಯಲ್ಲೂ ಮಹತ್ವದ ಬದಲಾವಣೆ ಮಾಡಿದೆ.
2019ನೇ ಕೇಂದ್ರ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಐದನೇ ಬಾರಿಗೆ ರೆಪೊ ದರದಲ್ಲಿ ಕಡಿತಗೊಳಿಸಿತು. ಪರಿಣಾಮ, ಗೃಹ ಮತ್ತು ಕಾರು ಸಾಲದ ಮೇಲಿನ ಬಡ್ಡಿ ದರದಲ್ಲಿ ಇಳಿಕೆಯಾಗಿ, ಗ್ರಾಹಕರು ಇರಿಸುವ ಠೇವಣಿಗಳ ಬಡ್ಡಿಯಲ್ಲಿ ಇಳಿಕೆಯಾಗಲಿದೆ.
ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 5ಕ್ಕೆ ತಲುಪಿದ ಬಳಿಕ ಆರ್‌ಬಿಐ, ಪ್ರಸ್ತುತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಸಹ ಕಡಿಮೆ ಮಾಡಿದೆ. ಕೇಂದ್ರ ಬ್ಯಾಂಕ್‌ನ ಹಿಂದಿನ ಅಂದಾಜಿನ ಪ್ರಕಾರ, ಶೇ 6.9 ರಿಂದ ಶೇ 6.1 ಕ್ಕೆ ಇಳಿಸಿದೆ. ಮುಂದಿನ 5 ವರ್ಷದಲ್ಲಿ ದೇಶ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ತಲುಪಬೇಕೆಂಬ ಪ್ರಧಾನಿ ಮೋದಿ ಕನಸಿಗೆ ಇದು ತೊಡಕಾಗಲಿದೆ.
ಸರ್ಕಾರದ ಆರ್ಥಿಕ ಉತ್ತೇಜನದ ಕ್ರಮಗಳು ಖಾಸಗಿ ಕ್ಷೇತ್ರವನ್ನು ಬಲಪಡಿಸಲು ಮತ್ತು ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲು ಸಹಾಯ ಮಾಡಲಿದೆ. ವಿತ್ತೀಯ ವಹಿವಾಟು ಸ್ಥಗಿತಗೊಂಡಿದೆ ಮತ್ತು ಅಪೂರ್ಣವಾಗಿದೆ ಎಂದು ಸೂಚಿಸಿದ ಅವರು, ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಆರ್‌ಬಿಐ ಪರಿಷ್ಕೃತ ನೀತಿಯ ನಿಲುವುಗಳನ್ನು ನಿರ್ವಹಿಸಲಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು.