ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಆರ್ಥಿಕ ಚಟುವಟಿಕೆಗಳು ನಿಧಾನಗೊಳ್ಳುತ್ತವೆ. 2019-20ರಲ್ಲಿ ಆರ್ಥಿಕ ಬೆಳವಣಿಗೆ ಶೇ 7ಕ್ಕಿಂತ ಅಧಿಕ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣ್ಯನ್ ಹೇಳಿದ್ದಾರೆ.
ಸುದ್ದಿವಾಹಿನಿಗೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಯುತ್ತಿರುವ ವೇಳೆ ದೇಶದ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತದೆ. ಚುನಾವಣೆ ಮುಕ್ತಾಯಗೊಳ್ತಿದ್ದಂತೆ ಕೈಗಾರಿಕಾ ವಲಯದಲ್ಲಿ ಚೇತರಿಕೆ ಕಂಡುಬರಲಿದೆ. ಈ ಹಿಂದಿನ ಅಂಶಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಣಕಾಸೇತರ ಬ್ಯಾಂಕಿಂಗ್ ಸಂಸ್ಥೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸರಿಯಾದ ಸಮಯದಲ್ಲಿ ಆರ್ಥಿಕ ಉತ್ತೇಜನ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಆಟೋ ಕ್ಷೇತ್ರದ ಹೊರತಾಗಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್ಎಂಸಿಜಿ) ಸರಕುಗಳ ಉತ್ಪಾದನೆ ಪ್ರಮಾಣ ಕುಸಿತವಾಗುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ಕಳವಳ ಸೃಷ್ಟಿಸಿದೆ ಎಂದರು.