ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಯಮಗಳು ಹಾಗೂ ರಿಟರ್ನ್ಸ್ ಸಲ್ಲಿಕೆಯನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆ ನಡೆಸಿದರು.
ವ್ಯಾಪಾರಿಗಳ ಹಾಗೂ ಲೆಕ್ಕಪತ್ರ ಪರಿಶೋಧಕರೊಂದಿಗೆ ಸಭೆ ನಡೆಸಿದ ಸಚಿವರು, ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡರು.
ಸಭೆಯ ಬಳಿಕ ಆದಾಯ ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಮಾತನಾಡಿ, ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆಯನ್ನು ಸರಳಗೊಳಿಸುವ ಕುರಿತು ಸಲಹೆಗಳನ್ನು ಪಡೆದು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವರು ಭರವಸೆ ನೀಡಿದ್ದಾರೆ. ಜಿಎಸ್ಟಿ ಸಲ್ಲಿಕೆದಾರರ ಸಮಸ್ಯೆ ಹಾಗೂ ಕಳವಳಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು.
ಜಿಎಸ್ಟಿಎನ್ ಮತ್ತು ಸಿಬಿಐಸಿ ಡಿಸೆಂಬರ್ 7ರಿಂದ ದೇಶದೆಲ್ಲೆಡೆ ಜಿಎಸ್ಟಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಸಂವಾದ, ಚರ್ಚೆಗಳು ನಡೆಸಲಿದೆ ಎಂದರು.
ಸಭೆಯು ಫಲಪ್ರದವಾಗಿದ್ದು, ಅಸ್ತಿತ್ವದಲ್ಲಿರುವ ಸೂಚನೆಗಳ ಬಗ್ಗೆ ಕೆಲವರಿಗೆ ತಿಳಿದಿರಲಿಲ್ಲ. ಗೊಂದಲಗಳನ್ನು ನಿವಾರಿಸಲು ಹಾಗೂ ಸರಳೀಕರಣಕ್ಕೆ ಸಲಹೆಗಳನ್ನು ವರ್ತಕರು ನೀಡಿದ್ದಾರೆ. ರಿಟರ್ನ್ಸ್ ಸಲ್ಲಿಸುವಲ್ಲಿ ಗಂಭೀರವಾದ ಸಮಸ್ಯೆಗಳು ಕಂಡುಬಂದಿಲ್ಲ. ಸಣ್ಣ-ಪುಟ್ಟ ತೊಂದರೆಗಳು ಇವೆ ಎಂದು ಪಾಂಡೆ ಹೇಳಿದ್ದಾರೆ.