ನವದೆಹಲಿ : ಹೊಸ ಕೃಷಿ ಕಾಯ್ದೆಗಳ ಅನುಷ್ಠಾನ ವಿರೋಧಿಸಿ ರಾಷ್ಟ್ರ ರಾಜಧಾನಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 20ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರದೇಶದಲ್ಲಿ ಸಂಚಾರ ಅಡೆತಡೆಯಿಂದಾಗಿ ನಿತ್ಯ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ಹೊಡೆತವಾಗುತ್ತಿದೆ ಎಂದು ಅಸ್ಸೋಚಾಮ್ ತಿಳಿಸಿದೆ.
ಕೃಷಿ ಕಾಯ್ದೆಗಳ ಬಿಕ್ಕಟ್ಟು ಪರಿಹರಿಸಲು ಸರ್ಕಾರ ಮತ್ತು ರೈತ ಸಂಘಟನೆಗಳನ್ನು ತೊಡಗಿಸಿಕೊಂಡಿವೆ. ಇದರ ನಡುವೆ ನಡೆಯುತ್ತಿರುವ ಮುಷ್ಕರದಿಂದಾಗಿ ಮೌಲ್ಯಯುತ ಸರಪಳಿ ಮತ್ತು ಸಾರಿಗೆ ಅಡ್ಡಿಗಳಿಂದ ಈ ಪ್ರದೇಶದ ಆರ್ಥಿಕತೆಗೆ ನಿತ್ಯ 3,000- 3,500 ಕೋಟಿ ರೂ.ಯಷ್ಟು ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಿದೆ.
ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಆರ್ಥಿಕತೆಗಳು ಪ್ರಧಾನವಾಗಿ ಕೃಷಿ ಮತ್ತು ತೋಟಗಾರಿಕೆ ಆಧರಿಸಿವೆ. ಆಹಾರ ಸಂಸ್ಕರಣೆ, ಹತ್ತಿ ಜವಳಿ, ವಾಹನ, ಕೃಷಿ ಯಂತ್ರೋಪಕರಣಗಳು, ಐಟಿ ಮುಂತಾದ ಹಲವು ಕೈಗಾರಿಕೆಗಳು ಅಲ್ಲಿನವರ ಜೀವನಾಡಿಯಾಗಿವೆ. ಪ್ರವಾಸೋದ್ಯಮ, ವ್ಯಾಪಾರ, ಸಾರಿಗೆ ಮತ್ತು ಆತಿಥ್ಯ ಸೇರಿ ಇತರೆ ಸೇವಾ ಕ್ಷೇತ್ರಗಳು ಪ್ರತಿಭಟನೆಯ ಪ್ರತಿಕೂಲ ಪ್ರಭಾವಕ್ಕೆ ಒಳಗಾಗಿವೆ.
ಪಂಜಾಬ್, ಹರಿಯಾಣ, ಹಿಮಾಚಲಪ್ರದೇಶ, ಜಮ್ಮು & ಕಾಶ್ಮೀರ ಸಂಯೋಜಿತ ಆರ್ಥಿಕತೆ ಗಾತ್ರ ಸುಮಾರು 18 ಲಕ್ಷ ಕೋಟಿ ರೂ.ಯಷ್ಟಿದೆ. ರಸ್ತೆ, ಟೋಲ್ ಪ್ಲಾಜಾ ಮತ್ತು ರೈಲ್ವೆಗಳ ದಿಗ್ಬಂಧನದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಅಸ್ಸೋಚಾಮ್ ಅಧ್ಯಕ್ಷ ನಿರಂಜನ್ ಹಿರಾನಂದಾನಿ ಹೇಳಿದರು.
ಕೇಂದ್ರದ ಜಿಎಸ್ಟಿ ನಷ್ಟ ಪರಿಹಾರ: 7ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ
ರಫ್ತು ಮಾರುಕಟ್ಟೆ ಪೂರೈಸುವ ಜವಳಿ, ವಾಹನ ಯೂನಿಟ್, ಬೈಸಿಕಲ್ ಮತ್ತು ಕ್ರೀಡಾ ಸಾಮಗ್ರಿಗಳಂತಹ ಕೈಗಾರಿಕೆಗಳು ಕ್ರಿಸ್‌ಮಸ್‌ಗೆ ಮುಂಚಿತವಾಗಿ ಪಡೆದ ಆರ್ಡರ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ಜಾಗತಿಕ ಅಭಿಯಾನಕ್ಕೆ ಧಕ್ಕೆ ತರುತ್ತದೆ ಎಂದರು.
ಅಸ್ಸೋಚಾಮ್ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಮಾತನಾಡಿ, ಸರಬರಾಜು ಸರಪಳಿ ಅಡೆತಡೆಗಳು ದೇಶಾದ್ಯಂತ ಹಣ್ಣು ಮತ್ತು ತರಕಾರಿಗಳ ಚಿಲ್ಲರೆ ದರದ ಮೇಲೆ ಹೆಚ್ಚಿನ ನಷ್ಟವನ್ನುಂಟು ಮಾಡುತ್ತಿವೆ. ಸರಬರಾಜು ಸರಪಳಿಯಲ್ಲಿನ ಗಂಭೀರ ಅಡೆತಡೆಗಳಿಗೆ ಕೈಗಾರಿಕೆಗಳು, ರೈತರು ಮತ್ತು ಗ್ರಾಹಕರು ಭಾರಿ ಬೆಲೆ ತೆರಬೇಕಾಗುತ್ತದೆ.
ವಿಪರ್ಯಾಸವೆಂದರೆ, ಕೋವಿಡ್-19 ಪ್ರಭಾವದಿಂದ ಆರ್ಥಿಕತೆ ಪುನಾರಂಭ ಆಗುತ್ತಿದ್ದಂತೆ ಈ ಅಡೆತಡೆಗಳು ಸಂಭವಿಸಿವೆ ಎಂದರು.