ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗ, ನಯತಿ ಹೆಲ್ತ್‌ಕೇರ್ ಸೇರಿದಂತೆ ಎರಡು ಸಂಸ್ಥೆಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದು, ಇದರಲ್ಲಿ ಕುಖ್ಯಾತ ರಾಡಿಯಾ ಟೇಪ್ ವಿವಾದದ ನೀರಾ ರಾಡಿಯಾ ಅವರೇ ಅಧ್ಯಕ್ಷರು ಮತ್ತು ಪ್ರವರ್ತಕರಾಗಿದ್ದರು.
ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದ 2ಜಿ ತರಂಗಾಂತರ ಹಗರಣದಲ್ಲಿ ಲಾಬಿ ನಡೆಸಿದ ಆರೋಪದಲ್ಲಿ ನೀರಾ ರಾಡಿಯಾ ಹೆಸರೂ ಸಹ ತಳಕು ಹಾಕಿಕೊಂಡಿತ್ತು. ಈ ಬಗ್ಗೆ ಸಿಬಿಐ ಅವರಿಗೆ ಸಂಬಂಧಿಸಿದ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಕಲೆ ಹಾಕಿತ್ತು. ಈಗ ಮತ್ತೊಂದು ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ.
ಗುರುಗ್ರಾಮ್ ಆರೋಗ್ಯ ಸಂಸ್ಥೆಯ ಜೊತೆಗೆ ಇಒಡಬ್ಲ್ಯು ಎಫ್‌ಐಆರ್‌ನಲ್ಲಿ ಹೆಸರಿಸಲಾದ ನಾರಾಯಣಿ ಹೂಡಿಕೆ ಖಾಸಗಿ ಲಿಮಿಟೆಡ್ ಸೇರಿ ಸಾಲದ ಮೂಲಕ 300 ಕೋಟಿ ರೂ. ಅಧಿಕ ಮೊತ್ತದ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುಗ್ರಾಮ್ ಮತ್ತು ವಿಮ್ಹಾನ್ಸ್ ಆಸ್ಪತ್ರೆ, ದೆಹಲಿಯ ಪ್ರೈಮೇಡ್ ಆಸ್ಪತ್ರೆ ಯೋಜನೆಯಲ್ಲಿ ನಯತಿ ಮತ್ತು ನಾರಾಯಣಿ ಸಂಸ್ಥೆಗಳು 2018-2020ರಲ್ಲಿ 312.50 ಕೋಟಿ ರೂ.ಯಷ್ಟು ಬ್ಯಾಂಕ್ ಸಾಲ ವಂಚಿಸಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ. ದೆಹಲಿ ಮೂಲದ ಶಸ್ತ್ರಚಿಕಿತ್ಸಕ ರಾಜೀವ್ ಕೆ. ಶರ್ಮಾ ಎಂಬುವವರು ದೂರು ದಾಖಲಿಸಿದ್ದರು.
ಸಂಸ್ಥೆಗಳು ನಾನಾ ಪ್ರಸಿದ್ಧ ಗುತ್ತಿಗೆದಾರರ ಹೆಸರಿನಲ್ಲಿ ನಕಲಿ ಖಾತೆ ತೆರೆಯುವ ಮೂಲಕ ಬ್ಯಾಂಕ್ ಸಾಲದಿಂದ ಕೋಟ್ಯಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿದ್ದಾರೆ. ಸಾಲದ ಹಣವು ನೇರವಾಗಿ ಈ ಖಾತೆಗಳಿಗೆ ವರ್ಗಾವಣೆ ಆಗಿದೆ ಎಂದು ಮೂಲಗಳು ತಿಳಿಸಿವೆ.
400 ಕೋಟಿ ರೂ.ಗೂ ಅಧಿಕ ಸಾಲ ಮತ್ತು ಈಕ್ವಿಟಿ ಹಣವನ್ನು ಗುಟ್ಟಾಗಿ ಡ್ರಾ ಮಾಡಿಕೊಳ್ಳಲಾಗಿದೆ ಎಂದು ಶರ್ಮಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.