ನವದೆಹಲಿ: ಶನಿವಾರ ನಡೆದ 36ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಸ್ಲ್ಯಾಬ್ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಖಾತೆ ಸಚಿವ ಅನುರಾಗ ಠಾಕೂರ್ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದು, ರಾಜ್ಯಗಳ ಹಣಕಾಸು ಸಚಿವರು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಚರ್ಚೆಯಲ್ಲಿ ಪಾಲ್ಗೊಂಡರು.
ಎಲೆಕ್ಟ್ರಿಕ್ಸ್ ವಾಹನಗಳ ಮೇಲಿನ ಶೇ 12ರಷ್ಟು ಇದ್ದ ತೆರಿಗೆಯನ್ನು ಶೇ 5ಕ್ಕೆ ತಗ್ಗಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ (ಇವಿ) ಚಾರ್ಜರ್‌ಗಳ ಸ್ಲ್ಯಾಬ್ ಅನ್ನು ಶೇ 18ರಿಂದ 5ಕ್ಕೆ ಇಳಿಸುವಂತೆ ಶಿಫಾರಸು ಮಾಡಲಾಗಿತ್ತು. 12ಕ್ಕೂ ಅಧಿಕ ಪ್ರಯಾಣಿಕರ ಆಸನ ಸಾಮರ್ಥ್ಯವಿರುವ ಎಲೆಕ್ಟ್ರಾನಿಕ್ ಬಸ್ಗಳ ಚಾರ್ಜರ್ಗಳಿಗೆ ಮಾತ್ರ ಜಿಎಸ್ಟಿ ಮಂಡಳಿಯು ಅನುಮೋದನೆ ನೀಡಿದೆ.
ಪರಿಷ್ಕೃತ ತೆರಿಗೆ ದರವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ವಾಯುಮಾಲಿನ್ಯ ನಿಯಂತ್ರಿಸಲು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಹಾಗೂ ಉದಯೋನ್ಮುಖ ಉದ್ಯಮದಲ್ಲಿ ಮುನ್ನಡೆ ಸಾಧಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.