ನವದೆಹಲಿ: ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಸತತ 5ನೇ ತಿಂಗಳು ಸಹ ಕುಸಿತ ದಾಖಲಾಗಿದೆ.
ದೇಶದ ಪ್ರಮುಖ ಎಂಟು ಉತ್ಪಾದನಾ ಕ್ಷೇತ್ರಗಳ ಮೂಲಸೌಕರ್ಯ ಜುಲೈ ಮಾಸಿಕದಲ್ಲಿ ಶೇ 9.6ರಷ್ಟು ಕುಸಿತ ದಾಖಲಿಸಿದೆ. 2019ರ ಜುಲೈನಲ್ಲಿ ಎಂಟು ಪ್ರಮುಖ ವಲಯಗಳ ಉತ್ಪಾದನೆಯು ಶೇ 2.6ರಷ್ಟು ವಿಸ್ತರಣೆ ಆಗಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ತಿಳಿಸಿದೆ.
ರಸಗೊಬ್ಬರ ಹೊರತುಪಡಿಸಿ ಉಳಿಕ ಏಳು ವಲಯಗಳಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಜುಲೈನಲ್ಲಿ ನಕಾರಾತ್ಮಕ ಬೆಳವಣಿಗೆ ದಾಖಲಿಸಿವೆ.
ಉಕ್ಕು, ಸಂಸ್ಕರಣಾಗಾರ ಉತ್ಪನ್ನ, ಸಿಮೆಂಟ್, ನೈಸರ್ಗಿಕ ಅನಿಲ, ಕಲ್ಲಿದ್ದಲು, ಕಚ್ಚಾ ತೈಲ ಮತ್ತು ವಿದ್ಯುತ್ ಉತ್ಪಾದನೆಯು ಕ್ರಮವಾಗಿ ಶೇ 16.5, ಶೇ 13.9, ಶೇ 13.5, ಶೇ 13.5, ಶೇ 10.2, ಶೇ 5.7, ಶೇ 4.9 ಮತ್ತು ಶೇ 2.3ರಷ್ಟು ಕುಸಿದಿವೆ.
ಇದೇ ತಿಂಗಳಲ್ಲಿ ರಸಗೊಬ್ಬರ ಉತ್ಪಾದನೆಯು ಶೇ 6.9ರಷ್ಟು ಏರಿಕೆ ಆಗಿದ್ದು, 2019ರ ಜುಲೈನಲ್ಲಿ 1.5 ಪ್ರತಿಶತದಷ್ಟಿತ್ತು. 2020-21ರ ಏಪ್ರಿಲ್-ಜುಲೈ ಅವಧಿಯಲ್ಲಿ ಉತ್ಪಾದನೆಯು ಶೇ 20.5ರಷ್ಟು ಕುಸಿದಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 3.2ರಷ್ಟು ಬೆಳವಣಿಗೆ ದಾಖಲಿಸಿತ್ತು.