ನವದೆಹಲಿ: ಮೆದಂತ ಆಸ್ಪತ್ರೆಗೆ ಭೂಮಿ ಹಂಚಿಕೆ ಸಂಬಂಧ ಕಾರ್ಡಿಯಾಲಜಿಸ್ಟ್ ಮತ್ತು ಮೆದಂತ ಮೆಡ್ಸಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ನರೇಶ್ ಟ್ರೆಹನ್ ಅವರ ವಿರುದ್ಧ ಅಕ್ರಮ ಹಣಕಾಸು ವ್ಯವಹಾರಗಳ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದೆ.
ಇಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಅಡಿಯಲ್ಲಿ ಟ್ರೆಹನ್ ಸೇರಿ 15 ಜನರ ವಿರುದ್ಧ ದೂರು ದಾಖಲಿಸಿಕೊಂಡಿದೆ.
ಗುರುಗ್ರಾಮ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಈ ಪ್ರಕರಣ ತೆಗೆದುಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
ಗುರುಗ್ರಾಮ ಪೊಲೀಸರು ನರೇಶ್ ಟ್ರೆಹನ್ ಮತ್ತು ಇತರರ ವಿರುದ್ಧ ಹಣ ಲೇವಾದೇವಿ, ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ ಮೊದಲಾದ ಪ್ರಕರಣಗಳನ್ನು ದಾಖಲಿಸಿದ್ದಾರೆ.
ರಾಮನ್ ಶರ್ಮಾ ಎಂಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಅಶ್ವನಿ ಕುಮಾರ್ ಅವರ ಆದೇಶದ ಮೇರೆಗೆ ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಆರೋಪಗಳನ್ನು ಟ್ರೆಹನ್ ಅವರು ತಳ್ಳಿಹಾಕಿದ್ದಾರೆ. ಸಾರ್ವಜನಿಕ ಹರಾಜಿನ ಮೂಲಕ ಆಸ್ಪತ್ರೆ ನಿರ್ಮಾಣವಾಗಿರುವ ಜಾಗ ಖರೀದಿಸಲಾಗಿದೆ. ದೂರಿನಲ್ಲಿ ಅಸಂಬದ್ಧ ಆರೋಪಗಳಿವೆ ಎಂದು ತಿಳಿಸಿದ್ದಾರೆ.