ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಎರಡನೇ ಅವಧಿಯ ಮೂರನೇ ಆರ್ಥಿಕ ಸಮೀಕ್ಷೆಯನ್ನು ಇಂದು ಮಂಡನೆ ಮಾಡಲಿದೆ.
ಏನಿದು ಆರ್ಥಿಕ ಸಮೀಕ್ಷೆ?
ಹೆಸರೇ ಹೇಳುವಂತೆ ದೇಶದ ಆರ್ಥಿಕತೆಯ ಸಮೀಕ್ಷೆ. ಸಾಮಾನ್ಯವಾಗಿ ಇದನ್ನು ಮುಂಗಡ ಪತ್ರ ಮಂಡನೆಯು ಹಿಂದಿನ ದಿನ ಮಂಡಿಸಲಾಗುತ್ತದೆ. ದೇಶದ ಒಟ್ಟಾರೆ ಆರ್ಥಿಕತೆಯ ಅಧಿಕೃತ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿರುತ್ತದೆ.
ಆರ್ಥಿಕ ಸಮೀಕ್ಷೆಯಲ್ಲಿ ಏನಿರಲಿದೆ?
ಪ್ರಸಕ್ತ ಹಣಕಾಸು ವರ್ಷದ ಸಂಪೂರ್ಣ ವಿವರ, ದೇಶದಲ್ಲಿ ಆರ್ಥಿಕಾಭಿವೃದ್ಧಿಗೆ ಇರಬಹುದಾದ ಅವಕಾಶಗಳು, ಅಭಿವೃದ್ಧಿಯ ಪಥದಲ್ಲಿ ಎದುರಾಗಲಿರುವ ಸವಾಲುಗಳ ಸಮಗ್ರ ಮಾಹಿತಿ, ವಿಶ್ಲೇಷಣೆ, ಮಾರ್ಗಸೂಚಕಗಳು, ನೀತಿ ನಿಯಮಗಳನ್ನು ಸಮೀಕ್ಷೆ ಒಳಗೊಂಡಿರುತ್ತದೆ. ವಿವಿಧ ಆರ್ಥಿಕ ವಲಯವಾರು ಏರಿಳಿತಗಳ ಪರಾಮರ್ಶೆ, ಏರಿಳಿತಕ್ಕೆ ಕಾರಣಗಳು ಮತ್ತು ಸುಧಾರಣೆಗಳು, ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ಸೂಚಿಸಲಾಗಿರುತ್ತದೆ.
ಸಮೀಕ್ಷೆಯ ಪ್ರಮುಖಾಂಶಗಳೇನು?
ಆರ್ಥಿಕ ಸಮೀಕ್ಷೆ, ಜಿಡಿಪಿ(ಆರ್ಥಿಕ ವೃದ್ದಿ ದರ) ಯು ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳುವ ವಿತ್ತೀಯ ವರ್ಷದಲ್ಲಿನ ಅಂದಾಜು ಮತ್ತು ಮುಂದಿನ ಹಣಕಾಸು ವರ್ಷದ ಅಂದಾಜು ಒಳಗೊಂಡಿರುತ್ತದೆ. ಆರ್ಥಿಕತೆಯ ಪ್ರಗತಿಗೆ ಹಾಗೂ ಹಿಂಜರಿತಕ್ಕೆ ಕಾರಣಗಳನ್ನು ವಿವರವಾಗಿ ನೀಡುತ್ತದೆ. ಆರ್ಥಿಕ ಹಿನ್ನೆಡೆಯಿಂದ ಪಾರಾಗಲು ಬೇಕಾದ ಮಾರ್ಗಗಳನ್ನೂ ಸಹ ಇದು ಸೂಚಿಸುತ್ತದೆ.
ಇದನ್ನೂ ಓದಿ: 5 ದಿನಗಳ ಕರಡಿ ಕುಣಿತಕ್ಕೆ ಬ್ರೇಕ್: ಬಜೆಟ್ ಅಧಿವೇಶನ ದಿನವೇ 400 ಅಂಕ ಜಿಗಿದ ಸೆನ್ಸೆಕ್ಸ್!