ನವದೆಹಲಿ: ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು 'ಭಾರತದ ಆರ್ಥಿಕತೆಯ ಕುಸಿತವು 'ತುಂಬ ಆತಂಕಕಾರಿ'ಯಾಗಿದ್ದು, ಜಿಡಿಪಿ ಮಾಪನದ ವಿಧಾನವನ್ನು ಹೊಸದಾಗಿ ನವೀಕರಿಸಬೇಕಿದೆ ಎಂದು ಪ್ರಧಾನಿ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ವಲಯದ ವಿಶ್ಲೇಷಣೆಯಂತೆ ವಿವಿಧ ರೀತಿಯ ಬೆಳವಣಿಗೆ ಪ್ರಗತಿಯು ಸರ್ಕಾರದ ನಿರೀಕ್ಷೆಗಿಂತ ಗಮನಾರ್ಹವಾಗಿ ಕೆಳಮಟ್ಟದಲ್ಲಿವೆ. ಆರ್ಥಿಕತೆ ಮಂದಗತಿಯು ಬಹಳ ಆತಂಕಕಾರಿ ಸಂಗತಿ ಎಂದು ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಕಟವಾದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರ ಸಂಶೋಧನಾ ಪ್ರಬಂಧದ ಬಗ್ಗೆ ಮಾತನಾಡಿದ ಅವರು, '2011ರ ನಂತರದ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಅಂಕಿ ಅಂಶವು ವರ್ಷಕ್ಕೆ ಸುಮಾರು ಶೇ 2.5 ಹೆಚ್ಚಾಗಿದೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೇ 2011 ಮತ್ತು 2016ರ ನಡುವೆ ವರದಿಯಾದ ಸರಾಸರಿ ಬೆಳವಣಿಗೆಯ ಶೇ 6.9ಕ್ಕೆ ಪ್ರತಿಯಾಗಿ ಬೆಳವಣಿಗೆ ದರ ಶೇ 3.5ರಿಂದ ಶೇ 5.5ರಷ್ಟು ಹೆಚ್ಚಾಗಿದೆ. ಜಿಡಿಪಿ ಲೆಕ್ಕಾಚಾರದಲ್ಲಿ ಸ್ವತಂತ್ರ ತಜ್ಞರ ಹೊರತಾಗಿ ನಮಗೆ ಹೊಸ ದೃಷ್ಟಿಯಿಂದ ಲೆಕ್ಕಾಚಾರ ಮಾಡಬೇಕಿದೆ. ತಪ್ಪು ದಾರಿಗೆ ಕರೆದೊಯ್ಯುವ ಜಿಡಿಪಿಯಿಂದ ತಪ್ಪು ವಿಧದ ನೀತಿಗಳು ಉಂಟಾಗುತ್ತವೆ ಎಂದು ವಿಶ್ಲೇಷಿಸಿದರು.
ಆರ್ಥಿಕತೆ ವೃದ್ಧಿಸಲು ಮತ್ತು ಖಾಸಗಿ ವಲಯದ ಹೂಡಿಕೆ ಶಕ್ತಿಗೆ ಬಲ ತುಂಬಲು 'ಹೊಸ ಸುಧಾರಣೆಗಳ' ಅಗತ್ಯವಿದೆ. ಭಾರತವ ಬೆಳವಣಿಗೆಯ ವೇಗ ಶೇ 2ರಿಂದ ಶೇ 3ರಷ್ಟು ಹೆಚ್ಚಿಸಲು ವಿದ್ಯುತ್ ಮತ್ತು ಬ್ಯಾಂಕೇತರ ಹಣಕಾಸು ವಲಯದ ಸಮಸ್ಯೆಗಳನ್ನು ತ್ವರಿತವಾಗಿ ಮುಂದಿನ ಆರು ತಿಂಗಳ ಒಳಗೆ ಬಗೆಹರಿಸಬೇಕಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.