ನವದೆಹಲಿ: ನಿಧಾನಗತಿ...ಆರ್ಥಿಕ ಹಿಂಜರಿತ...ವಾಣಿಜ್ಯ ಸಮರ...ಅಜಾಗತೀಕರಣ ಅಥವಾ ಡಿಗ್ಲೋಬಲೈಝೇಷನ್... ನಂತಹ ವಿಷಯಗಳ ಚರ್ಚೆಯು ಇತ್ತೀಚಿನ ದಿನಗಳಲ್ಲಿ ಸರ್ವವ್ಯಾಪಿಯಾಗಿದೆ. ಪ್ರಸ್ತುತ ಆರ್ಥಿಕ ಸನ್ನಿವೇಶಗಳ ಬಗ್ಗೆ ವಿಶ್ವಾದ್ಯಂತ ಆತಂಕವಿದ್ದು, ಭಾರತ ಸಹ ಇದರಿಂದ ಹೊರತಾಗಿಲ್ಲ.
ದೇಶದ ಅತಿದೊಡ್ಡ ವಲಯವಾದ ಆಟೊಮೊಬೈಲ್ ಮಾರಾಟ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ. ರೈಲ್ವೆಯ ಸರಕು ಸಾಗಣೆ, ದೇಶೀಯ ವಿಮಾನಯಾನ, ಮೂಲ ಸೌಕರ್ಯಗಳು, ಆಮದು, ಕೈಗಾರಿಕಾ ಉತ್ಪಾದನೆ, ಸಾಲದ ಸುಲಭ ಲಭ್ಯತೆ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತಕ್ಕೆ ಹಿನ್ನಡೆ ಆಗುತ್ತಿದೆ.
ಭಯಾನಕವಾದ ವಾಣಿಜ್ಯ ಸಮರವು ತೈಲದ ದರವನ್ನು ಪಾತಾಳಕ್ಕೆ ತಳ್ಳಿದೆ. ಅಮೆರಿಕ ಅಧ್ಯಕ್ಷರು ಚೀನಾದ ಸರಕುಗಳ ಮೇಲೆ ಸುಂಕದ ದರ ಹೆಚ್ಚಿಸಿ ಟ್ರೇಡ್ ವಾರ್ಗೆ ಚಾಲನೆ ನೀಡಿದರು. ಪ್ರತಿಯಾಗಿ ಚೀನಾ ಕೂಡ ಅದೇ ಹಾದಿ ಹಿಡಿದು ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿತು. ಯುರೋಪಿಯನ್ ರಾಷ್ಟ್ರಗಳಲ್ಲಿ ಕೂಡ ಪರಿಸ್ಥಿತಿ ಕಠೋರವಾಗಿದೆ.
ವಿಶ್ವ ಆರ್ಥಿಕತೆಯನ್ನು ಉನ್ನತಿಗೇರಿಸುವಲ್ಲಿ ಭಾರತ ಮತ್ತು ಚೀನಾದ ಪಾತ್ರದ ಬಗ್ಗೆ ಅರ್ಥಶಾಸ್ತ್ರಜ್ಞರು ಆಶಾವಾದ ಹೊಂದಿದ್ದಾರೆ. 17 ಮತ್ತು 18ನೇ ಶತಮಾನಗಳಲ್ಲಿ ಈ ಎರಡೂ ರಾಷ್ಟ್ರಗಳು ಜಾಗತಿಕ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. 1600ರ ವೇಳೆಯಲ್ಲಿ ವಿಶ್ವದ ಒಟ್ಟು ಜಿಡಿಪಿ ಪಾಲಿನಲ್ಲಿ ಭಾರತ ಮತ್ತು ಚೀನಾದ ಪಾಲು ಶೇ 51.4ರಷ್ಟಿತ್ತು. 1750ರ ಹೊತ್ತಿಗೆ ಪರಿಸ್ಥಿತಿ ವ್ಯತಿರಿಕ್ತವಾಯಿತು. 1950ರ ದಶಕದಲ್ಲಿ ಜಪಾನ್, ಆಗ್ನೇಯ ಏಷ್ಯಾದ ರಾಷ್ಟ್ರಗಳ ಮತ್ತು ಭಾರತ-ಚೀನಾದ ಬೆಳವಣಿಗೆಯ ವೇಗವನ್ನು ಗಮನಿಸಿದ ಅಂದಿನ ಇತಿಹಾಸಕಾರರು, 'ಏಷ್ಯಾದ ರಾಷ್ಟ್ರಗಳು ವಿಶ್ವ ನಾಯಕರಾಗುತ್ತಾರೆ' ಎಂದು ಬಣ್ಣಿಸಿದ್ದರು.
ಆರ್ಥಿಕ ಹಿಂಜರಿತ ಎಂದರೇನು?
ಸಾಮಾನ್ಯವಾಗಿ ಹೇಳುವುದಾದರೆ, ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) ದೇಶದಲ್ಲಿ ಉತ್ಪಾದಿಸುವ ಸರಕು ಮತ್ತು ಸೇವೆಗಳ ಮೌಲ್ಯಕ್ಕೆ ಸಮಾನವಾಗಿರುತ್ತದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ಬೆಳವಣಿಗೆಯ ದರಗಳಲ್ಲಿನ ಕಡಿತವಾದರೆ ಅದು ಆರ್ಥಿಕ ಹಿಂಜರಿತದ ಸಾಮಾನ್ಯ ವ್ಯಾಖ್ಯಾನವಾಗಿದೆ.
ಭಾರತದ ಜಿಡಿಪಿಯು 2019ರ ಮೊದಲ ತ್ರೈಮಾಸಿಕದಲ್ಲಿ ಶೇ 5.8ರಷ್ಟು ಆಗಿದ್ದು, ಮುಂದಿನ 2ನೇ ತ್ರೈಮಾಸಿಕದಲ್ಲಿ ಶೇ 5ಕ್ಕೆ ಇಳಿದರೆ, 3ನೇ ತ್ರೈಮಾಸಿಕವೂ ಕಡಿಮೆ ಬೆಳವಣಿಗೆ ದರ ದಾಖಲಿಸಿದರೆ ಆರ್ಥಿಕ ಹಿಂಜರಿತವು ಎಲ್ಲ ಕ್ಷೇತ್ರಗಳನ್ನು ಆವರಿಸಿದೆ ಎಂದು ತೀರ್ಮಾನಿಸಬಹುದು. ಅರ್ಥಶಾಸ್ತ್ರದ ಸಾಮಾನ್ಯ ವಾಖ್ಯದಲ್ಲಿ ಹೇಳುವುದಾರೇ: ಸತತ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ತಗ್ಗಿದ್ದರೇ ಆರ್ಥಿಕ ಹಿಂಜರಿತ ಎಂದು ಕರೆಯಬಹುದು. (ಆದರೆ, ಸತತ 5 ತ್ರೈಮಾಸಿಕಗಳಿಂದ ಜಿಡಿಪಿ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ಇದನ್ನು ಹಿಂಜರಿತ ಎಂದು ಘೋಷಿಸಿಲ್ಲ)
ಆರ್ಥಿಕ ಹಿಂಜರಿತ ಸಂಭವಿಸಿದ್ದರೇ ಜನರ ಕೊಳ್ಳುವ ಸಾಮರ್ಥ್ಯ ಕ್ಷೀಣಿಸುತ್ತದೆ. ದೇಶೀಯ ಹಾಗೂ ವಿದೇಶಿ ಹೂಡಿಕೆಯ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ. ಉದ್ಯೋಗ ಕಡಿತ ಸಂಭವಿಸಿ ನಿರುದ್ಯೋಗ ಸಮಸ್ಯೆ ತಲೆ ದೋರುತ್ತದೆ. ಮಂದಗತಿಯ ಬೆಳವಣಿಗೆಯು ಜಿಡಿಪಿಯ ಇಳಿಕೆಗೆ ಕಾರಣವಾಗಲಿದೆ.
ಈ ಹಿಂದೆ 2008ರಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿತ್ತು. ಅಮೆರಿಕದಲ್ಲಿ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ದಿವಾಳಿ ಆಗಿರುವುದಾಗಿ ಘೋಷಿಸಿದ ನಂತರ ಅಮೆರಿಕದಲ್ಲಿ ಉದ್ಭವಿಸಿದ ಆರ್ಥಿಕ ಬಿಕ್ಕಟ್ಟು ವಿಶ್ವವನ್ನು ಆವರಿಸಿಕೊಂಡಿತು. ಕೃಷಿ ಮತ್ತು ಕೈಗಾರಿಕೆಯ ಮೇಲೆ ಕೇಂದ್ರಿತವಾಗಿದ್ದ ಭಾರತ ಇದರಿಂದ ಕ್ಷಿಪ್ರವಾಗಿ ಚೇತರಿಸಿಕೊಂಡಿತು. ಆದರೆ, ಈಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ದೊಡ್ಡ ಖಿನ್ನತೆ
ಪ್ರಸ್ತುತ ಆರ್ಥಿಕ ಕುಸಿತದ ಖಿನ್ನತೆಯ ಎಲ್ಲ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ. 1929-1940ರ ಅವಧಿಯಲ್ಲಿ ಮಹಾ ಆರ್ಥಿಕ ಕುಸಿತ ಸಂಭವಿಸಿ ಜಾಗತಿಕ ಆರ್ಥಿಕತೆಯನ್ನು ಬೆಚ್ಚಿಬೀಳಿಸಿತ್ತು. ಉತ್ಪಾದನೆಯು ಅಧಿಕವಾಗಿದ್ದರೂ ಬಡತನದಲ್ಲಿದ್ದ ಜನರನ್ನು ಮೇಲೆತ್ತಲು ಆಗಲಿಲ್ಲ. ಅಮೆರಿಕದ ಷೇರು ಮಾರುಕಟ್ಟೆ ತೀರಾ ಕೆಳಮಟ್ಟ ತಲುಪಿದವು. ಷೇರುದಾರರು ಶತಕೋಟಿ ಡಾಲರ್ನಷ್ಟು ಸಂಪತ್ತು ಕಳೆದುಕೊಂಡರು. ನಿರುದ್ಯೋಗದ ದರವು ಶೇ 25ರಷ್ಟು ಮೀರಿ ದಾಟಿತು. ಹತ್ತು ವರ್ಷಗಳ ಆರ್ಥಿಕ ಹಿಂಜರಿತ ಮತ್ತು ಎರಡನೆಯ ಮಹಾಯುದ್ಧ ಸತತ ಆರು ವರ್ಷಗಳ ಕಾಲ ವಿಶ್ವವನ್ನು ಸಂಕಷ್ಟಕ್ಕೆ ದೂಡಿತ್ತು.
ಆಶ್ಚರ್ಯಕರ ಸಂಗತಿಯೆಂದರೆ ಈ ಹಿಂಜರಿತವು ಹೊಸ ಬೆಳವಣಿಗೆಗೆ ಕಾರಣವಾಯಿತು. ಅಲ್ಲಿಂದ 1973ರವರೆಗೆ ಆರ್ಥಿಕತೆಯು ಅತ್ಯುತ್ತಮ ವೇಗದಲ್ಲಿ ಬೆಳೆಯಿತು. ಅದೊಂದು ಸುವರ್ಣ ಯುಗವೆಂದು ದಾಖಲಾಯಿತು. ಆದರೆ, ತೈಲ ಉತ್ಪಾದಿಸುವ ದೇಶಗಳು ಈ ಬೆಳವಣಿಗೆಯ ಚಕ್ರದ ವೇಗಕ್ಕೆ ಅಡ್ಡಿಪಡಿಸಿದವು. 1973ರಲ್ಲಿ, ತೈಲ ಉತ್ಪಾದನೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಲಾಯಿತು, ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮೇಲೆ ಬೆಲೆಗಳನ್ನು ಹೆಚ್ಚಿಸಲಾಯಿತು.
1997ರಲ್ಲಿ ಏಷ್ಯಾದ ಆರ್ಥಿಕ ಬಿಕ್ಕಟ್ಟು:
1997ರಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿನ ಆರ್ಥಿಕ ಬಿಕ್ಕಟ್ಟು ಪ್ರಪಂಚದ ಮೇಲೂ ನಕಾರಾತ್ಮಕ ಪರಿಣಾಮ ಬೀರಿತು. ಜಾಗತಿಕ ಸಮುದಾಯದ ರಾಷ್ಟ್ರಗಳು ಬೃಹತ್ ಸಾಲ ಮತ್ತು ಹೂಡಿಕೆಗಳು ಆಗ್ನೇಯ ಏಷ್ಯಾ ರಾಷ್ಟ್ರಗಳನ್ನು ಭಾರೀ ಪ್ರಮಾಣದ ಸಾಲಕ್ಕೆ ತಳ್ಳಿದವು. ಮೊದಲ ಬಿಕ್ಕಟ್ಟು ಥಾಯ್ಲಂಡ್ನಲ್ಲಿ ದಾಖಲಾಗಿ, ಅದು ಇತರೆ ಮಾರುಕಟ್ಟೆಗಳಲ್ಲಿ ಭೀತಿಯನ್ನು ಸೃಷ್ಟಿಸಿತು. ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಂಡರು(Disinvestment). ಸರ್ಕಾರದ ಖಜಾನೆಗಳು ಖಾಲಿಯಾದವು. ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಿಂದ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸರಿಪಡಿಸಲಾಗಿದ್ದರೂ, ಮಾರುಕಟ್ಟೆಗಳು ಪುನರುಜ್ಜೀವನಗೊಳ್ಳಲು ವರ್ಷಗಳೇ ತೆಗೆದುಕೊಂಡವು.
ಆರ್ಥಿಕ ಹಿಂಜರಿತದ ಮುನ್ಸೂಚನೆಗಳು
ಮತ್ತೊಂದು ಜಾಗತಿಕ ಆರ್ಥಿಕ ಹಿಂಜರಿತದ ಮುನ್ಸೂಚನೆಯ ಕಾರಣಗಳನ್ನು ಅರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ.
* 18 ತಿಂಗಳ ಹಿಂದೆ ಆರಂಭವಾದ ಉಕ್ಕು ಉತ್ಪನ್ನಗಳ ಮೇಲಿನ ಅಮೆರಿಕದ ಹೆಚ್ಚುವರಿ ಸುಂಕ ನೀತಿ ಅಮೆರಿಕ- ಚೀನಾ ನಡುವೆ ವಾಣಿಜ್ಯ ಸಮರಕ್ಕೆ ನಾಂದಿ ಹಾಡಿತು
* ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದ ನಂತರ ಅಮೆರಿಕದ ಆರ್ಥಿಕತೆಯಲ್ಲಿ ಬಿಕ್ಕಟ್ಟು ಆರಂಭವಾಯಿತು. ಜರ್ಮನಿಯಲ್ಲಿ ಎರಡು ತ್ರೈಮಾಸಿಕಗಳ ಬೆಳವಣಿಗೆ ದರದಲ್ಲಿ ಸತತ ಕುಸಿತ ದಾಖಲಾಗಿದೆ
* ಚೀನಾದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ 30 ವರ್ಷಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರ ದಾಖಲಾಗಿದೆ
* ಯುರೋಪ್ ಒಕ್ಕೂಟದಲ್ಲಿನ ಬ್ರೆಕ್ಸಿಟ್ ಅಂಗೀಕಾರದ ಹಗ್ಗ- ಜಗ್ಗಾಟ ಐರೋಪ್ಯ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿಕೆಯ ಆತಂಕ ಸೃಷ್ಟಿಸಿದೆ
* ಅರ್ಜೆಂಟಿನಾ, ಇರಾನ್, ದಕ್ಷಿಣ ಆಫ್ರಿಕಾ, ಟರ್ಕಿ ಮತ್ತು ವೆನೆಜುವೆಲಾ ರಾಷ್ಟ್ರಗಳು ಕೆಟ್ಟ ಆರ್ಥಿಕ ಪರಿಣಾಮ ಎದುರಿಸುತ್ತಿವೆ.