ಭಾರತದ ರಾಷ್ಟ್ರೀಯ ಅಂಕಿ ಸಂಖ್ಯೆಗಳ ಇಲಾಖೆಯು 2018-19ನೇ ಸಾಲಿನ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆಯನ್ನು ಮತ್ತು ಏಪ್ರಿಲ್ ನಿಂದ ಜೂನ್ 2019ರ ತ್ರೈಮಾಸಿಕ ನಗರ ಅಂದಾಜು ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಜೂನ್ ಮೊದಲ ವಾರದಲ್ಲಿ ಈ ವರದಿ ಪ್ರಕಟವಾಗಿದೆ.
ಈ ವಾರ್ಷಿಕ ವರದಿಯನ್ನು ಜುಲೈ 2018 ರಿಂದ ಜೂನ್ 2019 ರ ಅವಧಿಗೆ ತಯಾರಿಸಲಾಗಿದ್ದು, ದೇಶದ 1,01,579 ಕುಟುಂಬಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. 2017-18 ಕ್ಕೆ ಹೋಲಿಸಿದರೆ 2018-19 ರಲ್ಲಿ ಕಾರ್ಮಿಕ ಮಾರುಕಟ್ಟೆಯ ಅಂಕಿ ಸಂಖ್ಯೆಗಳಲ್ಲಿ ಸುಧಾರಣೆಯಾಗಿರುವುದು ವರದಿಯ ಮೇಲ್ನೋಟಕ್ಕೆ ಕಂಡುಬರುತ್ತದೆ. 2017-18 ಕ್ಕೆ ಹೋಲಿಸಿದರೆ 2018-19 ರಲ್ಲಿ ಕಾರ್ಮಿಕರ ಪಾಲುದಾರಿಗೆ ಹೆಚ್ಚಾಗಿದೆ. ಅಂದರೆ ಉದ್ಯೋಗ ಸೃಷ್ಟಿಯ ಪ್ರಮಾಣ ಹೆಚ್ಚಾಗಿದ್ದು, ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆ.
2017-18 ರಲ್ಲಿ ಶೇ 48.4 ರಷ್ಟಿದ್ದ ಕಾರ್ಮಿಕರ ಸಹಭಾಗಿತ್ವ ಪ್ರಮಾಣ 2018-19 ರಲ್ಲಿ ಕೊಂಚ ಏರಿಕೆ ಕಂಡು ಶೇ 48.5 ರಷ್ಟಾಗಿದೆ. ಕಾರ್ಮಿಕರ ಸಹಭಾಗಿತ್ವದ ಪ್ರಮಾಣದಲ್ಲಿನ ಹೆಚ್ಚಳ ತೀರಾ ನಗಣ್ಯವಾಗಿದ್ದು, ಇದರಲ್ಲಿ ಗ್ರಾಮೀಣ ಮಹಿಳಾ ಕಾರ್ಮಿಕರ ಪಾಲನ್ನೂ ಸೇರಿಸಲಾಗಿದೆ. 2017-18 ರಲ್ಲಿ ಶೇ 21.7 ರಷ್ಟಿದ್ದ ಗ್ರಾಮೀಣ ಮಹಿಳಾ ಕಾರ್ಮಿಕರ ಸಂಖ್ಯೆ 2018-19 ಕ್ಕೆ ಶೇ 22.5 ಕ್ಕೆ ಏರಿಕೆಯಾಗಿದೆ. ಆದರೆ ಇದೇ ಸಮಯಕ್ಕೆ ನಗರ ಪ್ರದೇಶಗಳಲ್ಲಿ ಪುರುಷ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ನಗರ ಪ್ರದೇಶಗಳಲ್ಲಿ ಪುರುಷ ಕಾರ್ಮಿಕರ ಸಂಖ್ಯೆಯು ಶೇ 74.1 ರಿಂದ ಶೇ 73.7 ಕ್ಕೆ ಹಾಗೂ ಗ್ರಾಮೀಣ ಭಾಗದಲ್ಲಿ ಶೇ 75.6 ರಿಂದ 75.5 ಕ್ಕೆ ಕುಸಿದಿದೆ.
2017-18 ಹಾಗೂ 2018-19 ರಲ್ಲಿ ಮಹಿಳಾ ಮತ್ತು ಪುರುಷ ಕಾರ್ಮಿಕರ ಸಂಖ್ಯೆಯು ವಿರುದ್ಧ ದಿಕ್ಕಿನಲ್ಲಿ ಚಲಿಸಿರುವುದು ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಏನೇ ಆದರೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳವಾಗಿರುವುದು ಏಕೆಂದು ನೋಡಬೇಕಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಪ್ರಸ್ತುತ ವಾರದ ಲೆಕ್ಕದಲ್ಲಿ ಶೇ 0.8 ರಷ್ಟು ಹೆಚ್ಚಾಗಿದ್ದು, ಸಾಮಾನ್ಯ ಅಂಕಿ ಅಂಶಗಳ ಆಧಾರದಲ್ಲಿ ಶೇ 1.8 ರಷ್ಟು ಹೆಚ್ಚಾಗಿದೆ. ಆದರೆ ಇತರ ಸರಕಾರಿ ದಾಖಲೆಗಳ ಪ್ರಕಾರ 2018-19 ರಲ್ಲಿ ಕೃಷಿ ಚಟುವಟಿಕೆಗಳು ಇಳಿಮುಖ ಕಂಡಿರುವುದಾಗಿ ಹೇಳುತ್ತವೆ. ಹೀಗಾಗಿ ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಇತರ ಅಂಕಿ ಸಂಖ್ಯೆಗಳೊಂದಿಗೆ ತಾಳೆಯಾಗುತ್ತಿಲ್ಲ. 2017-18 ರಲ್ಲಿ ಶೇ 5.9 ರಷ್ಟಿದ್ದ ಅಭಿವೃದ್ಧಿ ದರ 2018-19 ರ ಸಾಲಿಗೆ ಶೇ 2.4 ಕ್ಕೆ ಕುಸಿದಿದೆ. ಒಟ್ಟಾರೆ ಅರ್ಥವ್ಯವಸ್ಥೆಯನ್ನು ಪರಿಗಣಿಸಿದಲ್ಲಿ ಬೆಳವಣಿಗೆ ದರವು 2017-18 ರಲ್ಲಿನ ಶೇ 6.6 ರಿಂದ 2018-19 ರಲ್ಲಿ ಶೇ 6ಕ್ಕೆ ಇಳಿದಿದೆ.